ಹಮಾಸ್ ಮೇಲೆ ಯುದ್ಧ.. ಇಸ್ರೇಲ್ ಆರ್ಥಿಕತೆ 11% ಕುಸಿತ – ಗಾಜಾ ಗೆದ್ದರೂ ಇಸ್ರೇಲ್ ಬೆಲೆ ತೆರಬೇಕಾ?

ಹಮಾಸ್ ಮೇಲೆ ಯುದ್ಧ.. ಇಸ್ರೇಲ್ ಆರ್ಥಿಕತೆ 11% ಕುಸಿತ – ಗಾಜಾ ಗೆದ್ದರೂ ಇಸ್ರೇಲ್ ಬೆಲೆ ತೆರಬೇಕಾ?

ಹಮಾಸ್ ಉಗ್ರರನ್ನು ಸರ್ವನಾಶ ಮಾಡಿಯೇ ಸಿದ್ಧ ಎನ್ನುತ್ತಿರೋ ಇಸ್ರೇಲ್ ಸೇನೆ ಇಡೀ ಗಾಜಾನಗರವನ್ನೇ ಸುತ್ತುವರಿದಿದೆ. ಗಾಜಾಗೆ ನುಗ್ಗಿರುವ ಯುದ್ಧಟ್ಯಾಂಕರ್ ಮತ್ತು ಭೂಸೇನೆ ಕಂಡು ಕೇಳರಿಯದ ನರಕ ಸೃಷ್ಟಿಸಿವೆ. ಬಾಂಬ್ ಗಳ ಸ್ಫೋಟ, ರಾಕೆಟ್​ಗಳ ದಾಳಿ, ಗುಂಡೇಟಿನ ಕ್ರೌರ್ಯಕ್ಕೆ ಶವಗಳ ರಾಶಿಯೇ ಬಿದ್ದಿದೆ. ವಿಶ್ವಸಂಸ್ಥೆ, ಅಮೆರಿಕದ ಮಾತಿಗೂ ಕ್ಯಾರೇ ಎನ್ನದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧೋತ್ಸಾಹ ತೋರುತ್ತಿದ್ದಾರೆ. ಇಸ್ರೇಲ್ ಪ್ರಧಾನಿಯ ಈ ಮಾತು, ದಿಟ್ಟ ನಿರ್ಧಾರ, ಸೇನೆಯ ಪ್ರಾಬಲ್ಯ ನೋಡಿದ್ರೆ ಇಸ್ರೇಲ್ ತುಂಬಾನೇ ಬಲಿಷ್ಠವಾಗಿದೆ ಎನ್ನಿಸುತ್ತೆ. ನಿಜ. ಯುದ್ಧದಲ್ಲಿ ಇಸ್ರೇಲ್ ಈಗ ಮೇಲುಗೈ ಸಾಧಿಸುತ್ತಿದೆ. ಆದ್ರೆ ಯುದ್ಧದಿಂದ ಈಗಾಗಲೇ ಇಸ್ರೇಲ್​ಗೆ ಬಹುದೊಡ್ಡ ಹೊಡೆತವೇ ಬಿದ್ದಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ.

ಯುದ್ಧ ಅಂದ್ರೆ ಅದು ಬರೀ ಪ್ರತಿಷ್ಠೆಯಲ್ಲ. ಅಂತಿಮವಾಗಿ ಸೋಲು ಗೆಲುವು ಯಾರದ್ದೇ ಆದರೂ ಎರಡೂ ರಾಷ್ಟ್ರಗಳು ಬಹುದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಅದು ಸಾವಿನಲ್ಲೇ ಇರಲಿ, ರಾಷ್ಟ್ರದ ಆರ್ಥಿಕತೆಯೇ ಆಗಲಿ. ಹಣ ಅನ್ನೋದು ನೀರಿನ ಹೊಳೆಯಂತೆ ಹರಿಸಬೇಕಾಗುತ್ತೆ. ಯುದ್ಧ ಒಂದು ಸಲ ಆರಂಭವಾದ ಮೇಲೆ  ಅದು ಮುಗಿಯಲು ತಿಂಗಳುಗಳೇ ಕಳೆಯಬಹುದು. ವರ್ಷಗಳೂ ಉರುಳಬಹುದು. ರಷ್ಯಾ ಉಕ್ರೇನ್ ಯುದ್ಧ ಶುರುವಾಗಿ 2 ವರ್ಷಗಳಾಗ್ತಾ ಬಂದ್ರೂ ಸಂಘರ್ಷ ಮಾತ್ರ ನಿಂತಿಲ್ಲ. ಇದು ರಷ್ಯಾ ಮತ್ತು ಉಕ್ರೇನ್ ಗೆ ದೊಡ್ಡ ಪೆಟ್ಟು ನೀಡಿದೆ. ಇದೀಗ ಇಸ್ರೇಲ್ ಹಮಾಸ್ ಕದನ ವಾರಗಳು ಉರುಳಿದ್ರೂ ಮುಗಿಯೋ ಲಕ್ಷಣ ಕಾಣ್ತಿಲ್ಲ. ಪರಿಣಾಮ ಎರಡೂ ರಾಷ್ಟ್ರಗಳಿಗೆ ಚೇತರಿಸಿಕೊಳ್ಳಲಾಗದಷ್ಟು ಹೊಡೆತ ಬೀಳುತ್ತಿದೆ. ಆರ್ಥಿಕ ಪರಿಸ್ಥಿತಿ ಹತ್ತಾರು ವರ್ಷ ಹಿಂದಕ್ಕೆ ಜಾರುತ್ತಿದೆ. ಜಗತ್ತಿನಲ್ಲಿ ಬಲಿಷ್ಠ ಸೇನೆ ಹೊಂದಿರುವ ಇಸ್ರೇಲ್ ಕೂಡ ಇದೇ ಸ್ಥಿತಿಯಲ್ಲಿದೆ. ಹಮಾಸ್ ಮೇಲಿನ ಯುದ್ಧದಿಂದ ಇಸ್ರೇಲ್  ಆರ್ಥಿಕತೆಯೂ ಶೇಕಡಾ 11ರಷ್ಟು ಕುಂಠಿತವಾಗಲಿದೆ ಎಂದು ಜೆ.ಪಿ ಮಾರ್ಗನ್ ವರದಿ ಮಾಡಿದೆ. ಯುದ್ಧದಲ್ಲಿ ಮೇಲುಗೈ ಸಾಧಿಸಿದ್ರೂ ಇಸ್ರೇಲ್​ಗೆ ಹೇಗೆ ನಷ್ಟವಾಗುತ್ತದೆ ಅನ್ನಿಸಬಹುದು. ಅದಕ್ಕೆ ಹಲವು ಕಾರಣಗಳಿವೆ.

ಇದನ್ನೂ ಓದಿ : ಹಮಾಸ್‌ – ಇಸ್ರೇಲ್‌ ದಾಳಿಯನ್ನೇ ಲಾಭ ಮಾಡಿಕೊಂಡ ಹುಚ್ಚುದೊರೆ! – ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ಯಾ ಉತ್ತರ ಕೊರಿಯಾ?

ಸೇನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇಸ್ರೇಲ್ ನಲ್ಲಿ ಪ್ರತಿಯೊಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮವಿದೆ. ಆದ್ರೆ ಪ್ರಸ್ತುತ ಒಂದೂವರೆ ಲಕ್ಷದಷ್ಟು ಮಾತ್ರ ಸಕ್ರಿಯ ಸೈನಿಕರಿದ್ದಾರೆ. ಇದೀಗ ಇದೀಗ ಗಾಜಾ ಪಟ್ಟಿ ಮೇಲೆ ಭೂಸೇನೆ ದಾಳಿ ನಡೆಸಿರುವ ಇಸ್ರೇಲ್ ಗೆ ಇತರೆ ರಾಷ್ಟ್ರಗಳು ಕೂಡ ದಾಳಿ ಮಾಡುವ ಆತಂಕ ಇದೆ. ಈಗಾಗಲೇ ಯೆಮೆನ್ ಮಿಸೈಲ್​ಗಳ ದಾಳಿ ಮಾಡಿದೆ. ಹೆಜ್ಬುಲ್ಲಾ ಸಂಘಟನೆ ಕೂಡ ಯುದ್ಧಕ್ಕಿಳಿಯಲು ಹವಣಿಸುತ್ತಿದೆ. ಹೀಗಾಗಿ ಸಿರಿಯಾ, ಲೆಬನಾನ್ ಗಡಿಗಳಲ್ಲೂ ಸೇನೆ ನಿಯೋಜಿಸಬೇಕಾದ ಅನಿವಾರ್ಯತೆ ಇಸ್ರೇಲ್ ಗಿದೆ. ಹೀಗಾಗಿ ದೇಶದ ರಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಿಲಿಟರಿ ಹೆಚ್ಚಿಸಬೇಕು. ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರನ್ನ ಸೇನೆಗೆ ನಿಯೋಜನೆ ಮಾಡಿಕೊಳ್ಳಬೇಕು. ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ಬೇರೆ ಕೆಲಸಗಳಲ್ಲಿ ತೊಡಗಿರುವವರನ್ನ ಮರಳಿ ಸೇನೆಗೆ ಕರೆಸಿಕೊಳ್ಳಲಾಗುತ್ತಿದೆ. ಪರಿಣಾಮ ಇಸ್ರೇಲ್ ನ ಬೇರೆ ಬೇರೆ ಸಂಸ್ಥೆಗಳಿಗೆ ಕಾರ್ಮಿಕರ ಕೊರತೆ ಉಂಟಾಗಿದೆ. ತಮ್ಮ ತಮ್ಮ ಕೆಲಸಗಳನ್ನ ಬಿಟ್ಟು ಸೇನೆಗೆ ಸೇರ್ಪಡೆ ಆಗಿರೋದ್ರಿಂದ ಉದ್ಯೋಗ ನಷ್ಟ ಉಂಟಾಗಿದ್ದು, ಉತ್ಪಾದನಾ ಪ್ರಮಾಣ ಕಡಿಮೆಯಾಗಿ ಆರ್ಥಿಕತೆ ಕುಂಠಿತವಾಗುತ್ತಿದೆ. ಅಲ್ಲದೆ ರಾಕೆಟ್ ಗಳನ್ನ ಹೊಡೆದು ಹಾಕುವ ಐರನ್ ಡೋಮ್ ವೆಚ್ಚ ತೀರಾ ದುಬಾರಿಯಾಗಿದೆ. ಒಂದು ರಾಕೆಟ್ ಉತ್ಪಾದನೆಗೆ ಹಮಾಸ್ ಪಡೆ ಭಾರತದ ಪ್ರಕಾರ 40 ರಿಂದ 50 ಸಾವಿರ  ಖರ್ಚು ಮಾಡ್ತಿದೆ. ಅದೇ ಐರನ್ ಡೋಮ್ ಒಂದು ರಾಕೆಟ್ ನಾಶ ಮಾಡಲು 50 ಲಕ್ಷ ವೆಚ್ಚವಾಗುತ್ತೆ. ಜೊತೆಗೆ ಇಸ್ರೇಲ್ ನ ರಕ್ಷಣಾ ವ್ಯವಸ್ಥೆ ಅತ್ಯಾಧುನಿಕವಾಗಿ ಇರೋದ್ರಿಂದ ಭಾರೀ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ಇದೆಲ್ಲದರ ಪರಿಣಾಮ ಇಸ್ರೇಲ್ ಆರ್ಥಿಕತೆಯು 11% ಕುಸಿತವಾಗಲಿದೆ ಎಂದು ಜೆಪಿ ಮಾರ್ಗನ್ ವರದಿ ಮಾಡಿದೆ.

ಸುತ್ತಮುತ್ತ ಶತ್ರುಗಳನ್ನೇ ಹೊಂದಿರುವ ಯಹೂದಿಗಳ ನಾಡಿನ ಬಹುದೊಡ್ಡ ಶಕ್ತಿ ಅಂದ್ರೆ ಅದು ಅಲ್ಲಿನ ಸೈನ್ಯ. ಮಿಲಿಟರಿ ನೀತಿಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಅಮೆರಿಕದ ನಿರಂತರ ಸಹಕಾರ ಬಲವಾಗಿ ನಿಂತಿದೆ. ಇಸ್ರೇಲ್ ಪುಟ್ಟ ರಾಷ್ಟ್ರವಾದ್ರೂ ತನ್ನ ಶತ್ರುಗಳಿಂದ ತನ್ನನ್ನ ರಕ್ಷಿಸಿಕೊಳ್ಳೋಕೆ ಶಸ್ತ್ರಾಸ್ತ್ರಗಳು ಮತ್ತು ಸೈನಿಕರ ತರಬೇತಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಏಕಾಂಗಿಯಾಗಿದ್ದರೂ, ಇಲ್ಲಿನ ಭದ್ರತೆಯನ್ನ ಭೇದಿಸುವುದು ಅನೇಕ ದೇಶಗಳಿಗೆ ಕಬ್ಬಿಣದ ಕಡಲೆಯಾಗಿದೆ.

ಪುಟ್ಟರಾಷ್ಟ್ರವಾಗಿರೋ ಇಸ್ರೇಲ್ ಸೈನ್ಯವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಪರಿಗಣಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಸ್ರೇಲ್ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಇತರೆ ರಾಷ್ಟ್ರಗಳಿಗೂ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳನ್ನ ಮಾರಾಟ ಮಾಡುತ್ತದೆ. ಇಂಟರ್‌ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಅಂದ್ರೆ IISS ಮಿಲಿಟರಿ ಬ್ಯಾಲೆನ್ಸ್ 2023 ರ ಪ್ರಕಾರ ಇಸ್ರೇಲ್ ಬಲಿಷ್ಠ ಮಿಲಿಟರಿ ಪಡೆ ಹೊಂದಿದೆ. ಇಸ್ರೇಲ್ ಸೇನೆ, ನೌಕಾಪಡೆ ಮತ್ತು ಅರೆಸೈನಿಕದಲ್ಲಿ 1,69,500 ಸಕ್ರಿಯ ಮಿಲಿಟರಿ ಸಿಬ್ಬಂದಿ ಇದ್ದಾರೆ. ಹಾಗೇ 4,65,000 ಸಿಬ್ಬಂದಿ ಮೀಸಲು ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. F-15, F-16 ಮತ್ತು F-35 ನಂತಹ ಅಭಿವೃದ್ಧಿ ಹೊಂದಿದ ವಿಮಾನಗಳ ಬಲ ಹೊಂದಿದೆ. ರಾಕೆಟ್ ದಾಳಿಯಿಂದ ಇಸ್ರೇಲ್ ನ ರಕ್ಷಿಸಲು ಅಬೇಧ್ಯ ಕೋಟೆಯನ್ನೇ ನಿರ್ಮಿಸಿಕೊಂಡಿದೆ. ಶತ್ರುಗಳ ಪ್ರತಿ ರಾಕೆಟ್ ಮತ್ತು ಕ್ಷಿಪಣಿಯನ್ನು ನಿಷ್ಕ್ರಿಯಗೊಳಿಸುವ ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಇದ್ದು, ಇದು ಯಾವುದೇ ದೇಶ, ಯಾವುದೇ ದಿಕ್ಕಿನಿಂದ ರಾಕೆಟ್ ಹಾರಿಸಿದ್ರೂ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಹಾಗೇ ಅಮೆರಿಕದ ನೆರವು ಸೇರಿದಂತೆ ಇಸ್ರೇಲ್ ತನ್ನ 2023ರ ರಕ್ಷಣಾ ಬಜೆಟ್ ನಲ್ಲಿ 23.6 ಶತಕೋಟಿ ಮೀಸಲಿಟ್ಟಿದೆ.

ಇದು ಇಸ್ರೇಲ್ ತನ್ನ ರಕ್ಷಣೆಗೆ ಕೊಡುವ ಪ್ರಾಮುಖ್ಯತೆ. ಆದ್ರೆ ಹಮಾಸ್ ಪಡೆ ಸ್ಥಿತಿ ಹೀಗಿಲ್ಲ. ಯಾಕಂದ್ರೆ ಹಮಾಸ್ ಬಂಡುಕೋರರು ಎಷ್ಟಿದ್ದಾರೆ ಅನ್ನೋ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 2021ರ ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ 30 ಸಾವಿರ ಇರಬಹುದು ಎಂದು ಅಂದಾಜಿಸಲಾಗಿತ್ತು. ಈ ಬಂಡುಕೋರರು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನ ಗಡಿಯಲ್ಲಿರುವ ಗಾಜಾಪಟ್ಟಿಯಲ್ಲಿ ನೆಲೆಯೂರಿದ್ದಾರೆ. ಅಲ್ಲಿಂದಲೇ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದೇಶ ಯುದ್ಧ ಘೋಷಣೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಯುದ್ಧದ ತೀವ್ರತೆ ಹೆಚ್ಚುತ್ತಲೇ ಹೋಗುತ್ತಿದೆ. ಗಾಜಾಪಟ್ಟಿಗೆ ನುಗ್ಗಿರೋ ಸೇನೆ ಇಡೀ ನಗರವನ್ನೇ ಧ್ವಂಸ ಮಾಡುತ್ತಿದೆ.

ಜಗತ್ತಿನ ಪುಟ್ಟ ರಾಷ್ಟ್ರ ಹಾಗೂ ಕಡಿಮೆ ಜನಸಂಖ್ಯೆ ಹೊಂದಿರುವ ಇಸ್ರೇಲ್ ದೇಶದ ಸಂಪೂರ್ಣ ವಿಸ್ತೀರ್ಣವೇ ಕೇವಲ 22,145 ಚದರ ಕಿಲೋಮೀಟರ್ ಇದೆ. ಆದ್ರೆ ನಮ್ಮ ಭಾರತ ದೇಶದ  ಬಿಹಾರ ರಾಜ್ಯದ ವಿಸ್ತೀರ್ಣ 94,164 ಚದರ ಕಿಲೋಮೀಟರ್ ಇದೆ. ಅಂದ್ರೆ ನಮ್ಮ ಬಿಹಾರಕ್ಕಿಂತ ನಾಲ್ಕು ಪಟ್ಟು ಚಿಕ್ಕದಾದ ದೇಶ ಇಸ್ರೇಲ್. ಪ್ರಸ್ತುತ 93.6 ಲಕ್ಷ ಜನಸಂಖ್ಯೆಯನ್ನ ಮಾತ್ರ ಹೊಂದಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸುತ್ತಲೂ ಶತ್ರುಗಳೇ ತುಂಬಿದ್ದಾರೆ. 1948ರಲ್ಲಿ ಇಸ್ರೇಲ್ ದೇಶ ಘೋಷಣೆಯಾದಾಗಿನಿಂದ ಈವರೆಗೂ ಹಲವು ಯುದ್ಧಗಳನ್ನ ಎದುರಿಸಿದೆ. ಪ್ಯಾಲೆಸ್ತೀನ್, ಅರಬ್ ಲೀಗ್ ಸೇರಿದಂತೆ ಹಲವು ರಾಷ್ಟ್ರಗಳ ವಿರುದ್ಧ ಏಕಾಂಗಿ ಹೋರಾಟ ನಡೆಸಿದೆ. ಈವರೆಗೂ ಶತ್ರು ರಾಷ್ಟ್ರಗಳನ್ನು ಏಕಾಂಗಿಯಾಗಿಯೇ ಸೋಲಿಸಿದೆ. ಇಸ್ರೇಲ್ ಜನಸಂಖ್ಯೆ ಕೋಟಿಗಿಂತಲೂ ಕಡಿಮೆಯೇ ಇರಬಹುದು. ಆದ್ರೆ ಭಾರತ, ಅಮೆರಿಕ, ಸೌದಿ ಸೇರಿದಂತೆ ಜಗತ್ತಿಗೆಲ್ಲ ರಕ್ಷಣಾ ತಂತ್ರಜ್ಞಾನ ಹಂಚುತ್ತಿರುವ ಪುಟ್ಟ ದೇಶ ಇದು. ಜಗತ್ತಿನಲ್ಲೇ ಬಲಿಷ್ಠ ಸೇನೆ ಹೊಂದಿರುವ ಯಹೂದಿ ರಾಷ್ಟ್ರ ಇದೀಗ ಮತ್ತೊಮ್ಮೆ ತನ್ನ ಅಸ್ತಿತ್ವ ಉಳಿಸಿಕೊಳ್ಳೋ ಸವಾಲು ಎದುರಾಗಿದೆ. ತನ್ನೆಲ್ಲಾ ರಕ್ಷಣಾ ಸಾಮರ್ಥ್ಯವನ್ನ ಬಳಸಿ ಗಾಜಾವನ್ನ ವಶಪಡಿಸಿಕೊಳ್ಳೋ ತವಕದಲ್ಲಿದೆ. ಮತ್ತೊಂದೆಡೆ ಗಲ್ಫ್ ರಾಷ್ಟ್ರಗಳು ಹಮಾಸ್ ಪರ ಯುದ್ಧಕ್ಕಿಳಿಯುವ ಎಲ್ಲಾ ಸಾಧ್ಯತೆಯೂ ಇದೆ. ಆದ್ರಿಲ್ಲಿ ಅಭೇದ್ಯ ಭದ್ರತೆ ಹೊಂದಿದ್ದ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದೇ ಇಂದಿಗೂ ಪ್ರಶ್ನೆಯಾಗಿದೆ.

Shantha Kumari