ತೀವ್ರ ಸ್ವರೂಪ ಪಡೆದುಕೊಂಡ ಹಮಾಸ್ – ಇಸ್ರೇಲ್ ಯುದ್ಧ – ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್
ಟೆಲ್ ಅವಿವ್: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಸ್ರೇಲ್ ಕೌಂಟರ್ ಅಟ್ಯಾಕ್ ಶುರು ಮಾಡುತ್ತಿದ್ದಂತೆ ಒತ್ತೆಯಾಳಾಗಿರಿಸಿದ ಇಸ್ರೇಲ್ ನಾಗರಿಕರನ್ನು ಕೊಲ್ಲುವುದಾಗಿ ಹಮಾಸ್ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.
ಶನಿವಾರ ಹಮಾಸ್ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿತ್ತು. ಈ ಬೆನ್ನಲ್ಲೇ ಹಮಾಸ್ ಕೃತ್ಯಕ್ಕೆ ಇಸ್ರೇಲ್ ತಕ್ಕ ಪಾಠ ಕಲಿಸಿದೆ. ಇದೀಗ ಈ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಲ್ಲಿಯವರೆಗೆ ಎರಡೂ ಕಡೆಗಳಿಂದ ಸುಮಾರು 1,600 ನಾಗರಿಕರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ, ಗಾಜಾದಲ್ಲಿ ಸಾವಿನ ಸಂಖ್ಯೆ 687ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಟ್ ಸೋಮವಾರ ಗಾಜಾದ ಮೇಲೆ ಸಂಪೂರ್ಣ ಮುತ್ತಿಗೆಯ ಆದೇಶ ಹೊರಡಿಸಿದೆ. ಇದಾದ ನಂತರ ಪ್ಯಾಲೆಸ್ಟೀನ್ ಹಮಾಸ್ ಗುಂಪು ಒತ್ತೆಯಾಳಾಗಿ ಇಟ್ಟಿರುವ ನೂರಾರು ಇಸ್ರೇಲಿ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.
ಇದನ್ನೂ ಓದಿ: ಭಾರತೀಯ ವಾಯುಸೇನೆಗೆ 91ರ ಸಂಭ್ರಮ – 72 ವರ್ಷಗಳ ಬಳಿಕ ಇಂಡಿಯನ್ ಏರ್‌ಫೋರ್ಸ್‌ಗೆ ಹೊಸ ಧ್ವಜ
ಇಸ್ರೇಲ್ ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದು, ವಿದ್ಯುತ್, ಆಹಾರ, ನೀರು, ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿದ ಹಮಾಸ್ ಸಶಸ್ತ್ರ ವಿಭಾಗ, ಯಾವುದೇ ಸೂಚನೆ ನೀಡದೆ ನಮ್ಮ ಜನರನ್ನು ಗುರಿಪಡಿಸಿದ್ದಲ್ಲಿ, ನಾವು ಒತ್ತೆಯಾಳಾಗಿ ಇಟ್ಟಿರುವವರಲ್ಲಿ ಒಬ್ಬೊಬ್ಬರನ್ನೇ ಕೊಲ್ಲಲಾಗುವುದು ಎಂದಿದೆ. ಈಗಾಗಲೇ ಇಸ್ರೇಲ್‌ನ ವೈಮಾನಿಕ ದಾಳಿಯಿಂದಾಗಿ ಒತ್ತೆಯಾಳಾಗಿದ್ದ ನಾಲ್ವರು ನಾಗರಿಕರು ಕೊಲ್ಲಲ್ಪಟ್ಟಿದ್ದಾಗಿ ಹಮಾಸ್ ಹೇಳಿಕೊಂಡಿದೆ. ಆದರೆ ಇದು ಖಚಿತವೇ ಎಂಬುದು ದೃಢವಾಗಿಲ್ಲ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅವರ ಸರ್ಕಾರ ಯುದ್ಧಕ್ಕೆ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ ಎಂದು ವರದಿಯಾಗಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ದಾಳಿಮಾಡಿರುವುದು ಯುದ್ಧಕ್ಕೆ ಪ್ರಚೋದನೆ ನೀಡಿದೆ. ಆದರೆ ನಾವು ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ಎಂದು ಅವರು ಹೇಳಿದ್ದಾರೆ.