ಆಸ್ಪತ್ರೆಗಳನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವಿಡಿಯೋ ಸಾಕ್ಷಿ
ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಸ್ರೇಲ್ ಸೇನೆ ಗಾಜಾ ನಗರದಲ್ಲಿ ಉಗ್ರರನ್ನು ಸದೆಬಡಿಯಲು ಮಿಂಚಿನ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಇದೀಗ ಹಮಾಸ್ ಉಗ್ರರ ದುಷ್ಕೃತ್ಯಗಳು ಒಂದೊಂದೇ ಬಯಲಾಗುತ್ತಿದೆ. ಗಾಜಾಪಟ್ಟಿಯಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾವನ್ನು ಹಮಾಸ್ ತಮ್ಮ ಉಗ್ರ ಚಟುವಟಿಕೆಗಳ ತಾಣವಾಗಿಸಿಕೊಂಡಿರುವುದಾಗಿ ಇಸ್ರೇಲ್ ವಿಡಿಯೋ ಸಾಕ್ಷಿ ಸಮೇತ ತಿಳಿಸಿದೆ.
ಹಮಾಸ್ ಉಗ್ರರು ಗಾಜಾದ ಆಸ್ಪತ್ರೆಗಳಲ್ಲಿ ಇಸ್ರೇಲ್ ಪ್ರಜೆಗಳನ್ನು ಒತ್ತೆಯಾಗಿರಿಸಿದೆ ಅಂತಾ ಹಲವು ಸಮಯಗಳಿಂದ ಆರೋಪಿಸುತ್ತಾ ಬಂದಿದೆ. ಹಮಾಸ್ ಉಗ್ರರ ಮತ್ತೊಂದು ಮುಖವನ್ನು ಇಸ್ರೇಲ್ ಬಯಲು ಮಾಡಿದೆ. ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಇಟ್ಟಿರುವ ವೀಡಿಯೋವೊಂದನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಮದುವೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ವರನ ಮನೆಯಲ್ಲೇ ಯುವತಿ ದುರಂತ ಸಾವು!
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೇಪಾಳ, ಥಾಯ್ಲೆಂಡ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್ ಉಗ್ರರು ಅಪಹರಿಸಿ ಅವರ ಮೇಲೆ ಹಲ್ಲೆ ನಡೆಸಿ ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ ಎಂದು ವೀಡಿಯೋ ಸಮೇತ ಇಸ್ರೇಲ್ ಸೇನೆ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.
ಇಷ್ಟು ಮಾತ್ರವಲ್ಲದೇ ಅಲ್ ಶಿಫಾ ಆಸ್ಪತ್ರೆಯಲ್ಲಿ ಸುರಂಗವೊಂದನ್ನು ಪತ್ತೆಹಚ್ಚಿರುವ ಮತ್ತೊಂದು ವೀಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ. ಅಲ್ ಶಿಫಾ ಆಸ್ಪತ್ರೆಯ ಸಂಕೀರ್ಣದ ಕೆಳಗಡೆ ಸುಮಾರು 55 ಮೀ. ಉದ್ದದ ಸುರಂಗವನ್ನು ಕಂಡುಹಿಡಿದಿರುವುದಾಗಿ ತಿಳಿಸಿದೆ. ಈ ಸುರಂಗದ ಪತ್ತೆಯಿಂದಾಗಿ ಹಮಾಸ್ ಉಗ್ರರು ಗಾಜಾ ನಿವಾಸಿಗಳನ್ನು ಹಾಗೂ ರೋಗಿಗಳನ್ನು ರಕ್ಷಾ ಕವಚವಾಗಿ ಬಳಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಒತ್ತಿ ಹೇಳಿದೆ. ಆದರೆ ಅಲ್ ಶಿಫಾ ಆಸ್ಪತ್ರೆಯ ಕೆಳಗಡೆ ಸುರಂಗವನ್ನು ಪತ್ತೆ ಮಾಡಿರುವ ಇಸ್ರೇಲ್‌ನ ಹೇಳಿಕೆಯನ್ನು ಹಮಾಸ್ ತಳ್ಳಿಹಾಕಿದೆ. ಇದು ಶುದ್ಧ ಸುಳ್ಳು ಎಂದಿದೆ. ಇಸ್ರೇಲಿ ಪಡೆಗಳು ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿದ್ದು, ಅವರಿಂದ ಇನ್ನೂ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಗಾಜಾ ಆರೋಗ್ಯ ಸಚಿವಾಲಯದ ನಿರ್ದೇಶಕ ಮೌನಿರ್ ಎಲ್ ಬಾರ್ಶ್ ಅಲ್ ಜಜೀರಾ ತಿಳಿಸಿದ್ದಾರೆ.