ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್​ ಪ್ರಜೆಗಳನ್ನು ಬಿಡುಗಡೆ ಮಾಡಿದ ಹಮಾಸ್ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್​ ಪ್ರಜೆಗಳನ್ನು ಬಿಡುಗಡೆ ಮಾಡಿದ ಹಮಾಸ್ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಕಾಳಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದಲ್ಲಿ ಸಾವಿರಾರು ಜನ ಪ್ರಾಣ ಬಿಟ್ಟಿದ್ದು, ದಿನದಿನಕ್ಕೂ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಇದರ ನಡುವೆ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್​ ಪ್ರಜೆಗಳನ್ನು ಮಾನವೀಯ ಆಧಾರದ ಮೇಲೆ ಹಮಾಸ್ ಸಶಸ್ತ್ರ ವಿಭಾಗ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿದೆ.

ಕತಾರ್​ನ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಕಸ್ಸಾಮ್ ಬ್ರಿಗೇಡ್ಸ್ ವಕ್ತಾರ ಅಬು ಉಬೈದಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಮಾಸ್ ಉಗ್ರರ ವಶದಲ್ಲಿದ್ದ ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್‍ಗೆ ಮರಳಿದ್ದಾರೆ. ಅವರ ಬಿಡುಗಡೆ ಬಳಿಕ ಅಮೆರಿಕ ಅಧ್ಯಕ್ಷ್ಯ ಜೋ ಬೈಡನ್ ಅವರ ಬಳಿ ಫೋನ್‍ನಲ್ಲಿ ಮಾತಾಡಿದ್ದಾರೆ. ಈ ವಿಷಯ ಬಹಳ ಸಂತೋಷ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗಾಜಾ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದೇ ಸುಳ್ಳಾ..? – ಸ್ಫೋಟದ ಹಿಂದೆ ಹಮಾಸ್ ಉಗ್ರರ ಕೈವಾಡ ಇದೆ ಎಂದ ಇಸ್ರೇಲ್

ಈ ಬಗ್ಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇಸ್ರೇಲ್‌ನಲ್ಲಿ ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್‌ನಿಂದ ಬಂಧಿತರಾಗಿದ್ದ ಇಬ್ಬರೂ ಮಹಿಳೆಯರು ಇದೀಗ ಇಸ್ರೇಲಿ ಅಧಿಕಾರಿಗಳ ವಶದಲ್ಲಿದ್ದಾರೆ. ಯುಎಸ್​ ರಾಯಭಾರ ಕಚೇರಿಯ ತಂಡವು ಅವರಿಬ್ಬರನ್ನು ಮರಳಿ ಕರೆತರಲಿದೆ ಎಂದು ತಿಳಿಸಿದ್ದಾರೆ.

ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆ ನಡೆಸಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಹೆಚ್ಚಿನ ಜನರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಸಾಂಕೇತಿಕವಾಗಿ ಆದ ಬಿಡುಗಡೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.

ಅಕ್ಟೋಬರ್ 7 ರಂದು ಹಮಾಸ್​, ಇಸ್ರೇಲ್ ಮೇಲೆ ದಾಳಿ ಮಾಡಿ ಕೆಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಅದಕ್ಕೆ ಇಸ್ರೇಲ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹಮಾಸ್ ಭಯೋತ್ಪಾದಕರ ಮೇಲೆ ನೆಲ ಮತ್ತು ವಾಯು ದಾಳಿಯನ್ನು ಇಸ್ರೇಲ್​ ಸೇನೆ ಮುಂದುವರೆಸಿದೆ. ಹಮಾಸ್ ದಾಳಿಯಿಂದ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದು, ಹಮಾಸ್​ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ 4,000ಕ್ಕೂ ಹೆಚ್ಚು ಜನರು ಎರಡೂ ಕಡೆಗಳಿಂದ ಮೃತಪಟ್ಟಿದ್ದಾರೆ.

Shwetha M