50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ – 4 ದಿನ ಕದನ ವಿರಾಮ ಘೋಷಿಸಿದ ಇಸ್ರೇಲ್!
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಅಂತಾ ಇಸ್ರೇಲ್ ಹೇಳಿದೆ. ಇದೀಗ ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್ ಅನುಮೋದಿಸಿದೆ.
ನಾಲ್ಕು ದಿನಗಳಲ್ಲಿ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯುದ್ಧ ವಿರಾಮ ನೀಡಲಾಗುವುದು ಎಂದು ಇಸ್ರೇಲ್ ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ. ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಯುದ್ಧ ವಿರಾಮವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಆದರೆ, ಒತ್ತೆಯಾಳುಗಳಿಗೆ ಪ್ರತಿಯಾಗಿ ಹಮಾಸ್ ಕೈದಿಗಳ ಬಿಡುಗಡೆ ಬಗ್ಗೆ ಇಸ್ರೇಲ್ ಉಲ್ಲೇಖಿಸಿಲ್ಲ.
ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಇಡಿ ಶಾಕ್.. – 752 ಕೋಟಿ ಮೌಲ್ಯದ ಆಸ್ತಿ ಜಪ್ತಿ!
ಒಪ್ಪಂದದ ಭಾಗವಾಗಿ ಇಸ್ರೇಲ್ 150 ಪ್ಯಾಲೆಸ್ಟಿನ್ ಮಹಿಳೆಯರು ಮತ್ತು ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದು, ನಮ್ಮ ವಶದಲ್ಲಿರುವ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಮಾಸ್ ತಿಳಿಸಿದೆ.
‘ಎಲ್ಲ ಒತ್ತೆಯಾಳುಗಳನ್ನು ಕರೆತರಲು ಇಸ್ರೇಲ್ ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಸಾಧಿಸಲು ಮೊದಲ ಹಂತದ ಪ್ರಸ್ತಾವಿತ ಒಪ್ಪಂದವನ್ನು ಅನುಮೋದಿಸಲಾಗಿದೆ’ಎಂದು ಹೇಳಿದೆ.
ಈ ನಡುವೆ ಇಸ್ರೇಲ್ ಸೇನೆ ಮತ್ತೊಂದು ಹೇಳಿಕೆ ಬಿಡುಗಡೆ ಮಾಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್ ಮೊದಲ ಕದನವಿರಾಮ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ. ಹಮಾಸ್ ನಿರ್ಮೂಲನೆಯಾಗುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.