ಇಸ್ರೇಲ್ ಮುಂದೆ ಮಂಡಿಯೂರಿತಾ ಹಮಾಸ್?
ಕದನ ವಿರಾಮ ಆಗುತ್ತಾ?

ಮನುಷ್ಯ ಮನುಷ್ಯ ನಡುವೆ ದ್ವೇಷ ಹೆಚ್ಚಾಗುತ್ತಿದೆ.. ದೇಶ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ. ಯಾರು ಕೂಡ ಊಹಿಸದ ರೀತಿಯಲ್ಲಿ ದಾಳಿಗಳು, ಬಲಿಗಳು ಆಗುತ್ತಿವೆ.. ಒಂದು ಕ್ಷಣ ಯೋಚಿಸಿ ಇಬ್ಬರು ಕುಳಿತು ಮಾತನಾಡಿದ್ರೆ ಸಮಸ್ಯೆ ಬಗೆ ಹರಿಯುತ್ತೆ. ಯುದ್ಧಗಳಿಗೆ ಬ್ರೇಕ್ ಬೀಳುತ್ತೆ.. ಆದ್ರೆ ನಾನು ನನ್ನದ್ದು ಅನ್ನೋ ಅಹಃನಿಂದ ದೇಶ ದೇಶಗಳ ನಡುವೆ ಕಿಚ್ಚು ಹೆಚ್ಚಾಗುತ್ತಿದೆ. ಅಮಾಯಕ ಜನರ ಪ್ರಾಣ ಹೋಗುತ್ತಿದೆ. ಅದ್ರಲ್ಲೂ ಜಿದ್ದಿಗೆ ಬಿದ್ದವರಂತೆ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯದಿಂದ ಸಮರ ನಡೆಸುತ್ತಿರುವ ಇಸ್ರೇಲ್-ಹಮಾಸ್, ರಷ್ಯಾ-ಉಕ್ರೇನ್ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಜಾಗತಿಕ ನಾಯಕರು ನಿರಂತರ ಯತ್ನ ನಡೆಸುತ್ತಿದ್ದಾರೆ. ಅದರ ಫಲವಾಗಿ ಇದೀಗ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ವಿರಾಮಕ್ಕೆ ಸಂಬಂಧಿಸಿದಂತೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ : ಕುಂಭ ಮೇಳಕ್ಕೆ ಜನವೋ ಜನ! 45 ದಿನ 45 ಕೋಟಿ ಭಕ್ತರು!
ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಕರಡನ್ನು ಸಿದ್ಧಪಡಿಸಲಾಗಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ವರದಿಗಳಾಗಿವೆ.. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇತ್ತೀಚೆಗಷ್ಟೇ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು. ಈಗಾಗಲೇ ಹತ್ತಾರು ತಿಂಗಳಿನಿಂದಲೂ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ. ಯುದ್ಧಕ್ಕೆ ಬ್ರೇಕ್ ಹಾಕುವ ಒಪ್ಪಂದವು ಮುಗಿದು ಹೋಯ್ತು ಅನ್ನುವಷ್ಟರಲ್ಲಿ ‘ಅಹಂ’ ಎದುರಾಗಿ ಎಲ್ಲ ಪ್ರಯತ್ನಗಳೂ, ಮಾತುಗತೆಗಳೂ ಅರ್ಧಕ್ಕೆ ನಿಂತು ಹೋದವು. ಅತ್ತ ಇಸ್ರೇಲ್ ಕೂಡ ತಣ್ಣಗಾಗಲಿಲ್ಲ, ಈ ಕಡೆ ಹಮಾಸ್ ಕೂಡ ದಾಳಿಗಳನ್ನು ನಿಲ್ಲಿಸಲಿಲ್ಲ. ಇನ್ನು ಸಂಧಾನಕ್ಕೆ ಬಂದ ದೇಶಗಳು ಇವರ ಕಚ್ಚಾಟ ನೋಡಿ ಸುಮ್ಮನಾಗಿದ್ದವು.
ಇಸ್ರೇಲ್‌ನ ವಿದೇಶಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಬೈಡನ್ ಅವರ ಉನ್ನತ ಸಲಹೆಗಾರ ಬ್ರೆಟ್ ಮೆಕ್‌ಗುರ್ಕ್ ಇಬ್ಬರೂ ಕತಾರ್ ರಾಜಧಾನಿ ದೋಹಾದಲ್ಲಿದ್ದಾರೆ. ಅಲ್ಲಿಯೂ ಒಪ್ಪಂದದ ಬಗ್ಗೆ ಅಂತಿಮ ಚರ್ಚೆಗಳು ನಡೆದಿವೆ. ಇನ್ನು ಟ್ರಂಪ್ ಅಧಿಕಾರ ಸ್ವೀಕಾರ ಜನವರಿ 20ರಂದು ನಡೆಯಲಿದ್ದು, ಅದಕ್ಕೂ ಮುಂಚೆಯೇ ಕದನ ವಿರಾಮ ಒಪ್ಪಂದಗಳು ಪೂರ್ಣಗೊಂಡರೆ, ಬೈಡನ್ ಪ್ರಯತ್ನವೂ ಇತಿಹಾಸದಲ್ಲಿ ಉಳಿಯಲಿದೆ.
ಸತತ ಹದಿನೈದು ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಒಂದೇ ಒಂದು ಬಾರಿ ಮಾತ್ರ ಅಲ್ಪಾವಧಿಗೆ ಕದನ ವಿರಾಮ ಕೈಗೂಡಿತ್ತು. ಈಗ ಕತಾರ್ ಸಿದ್ಧಪಡಿಸಿರುವ ಒಪ್ಪಂದವು ಇಸ್ರೇಲ್ ಒಂದು ಹಂತದ ಯುದ್ಧವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಸಿದ್ದವಿದೆ. ಆದರೆ, ಹಮಾಸ್ ಇಸ್ರೇಲ್ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆಯುವಂತೆ ಒತ್ತಾಯಿಸುತ್ತಿದೆ. ಅಂತಿಮ ಹಂತದಲ್ಲಿ 12 ಒತ್ತೆಯಾಳುಗಳನ್ನ ಬಿಡುಗಡೆಗೆ ಹಮಾಸ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಯುದ್ಧ ವಿರಾಮ ಆಗೋಕೆ ಏನೆಲ್ಲಾ ನಿಯಮಗಳಿಗೆ ಹಮಾಸ್ ಮತ್ತು ಇಸ್ರೇಲ್ ಒಪ್ಪಿಕೊಳ್ಳಬೇಕು, ಯಾವುದು ಇರಬೇಕು, ಯಾವುದನ್ನು ತೆಗೆಯಬೇಕು ಅನ್ನೋ ಎಲ್ಲ ಅಂಶಗಳ ಬಗ್ಗೆಯೂ ಮಾತುಕತೆ ನಡೆದಿದೆ ಗಾಜಾದಲ್ಲಿ ಒತ್ತೆಯಾಳುಗಳ ಬಿಡುಗಡೆ ಹಾಗೂ ಕದನ ವಿರಾಮಕ್ಕೆ ಇನ್ನಿಲ್ಲದಂತೆ ಅಮೆರಿಕದ ಅಧಿಕಾರಿಗಳು ಯತ್ನ ನಡೆಸಿದ್ದಾರೆ. ಜನವರಿ 20ರೊಳಗೆ ಆ ಎಲ್ಲವೂ ಮುಗಿಯುವಂತೆ ಸತತ ಪ್ರಯತ್ನದಲ್ಲಿದ್ದಾರೆ. ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ಕಾರ್ಯಾಚರಣೆಯನ್ನು ನಿಲ್ಲಿಸುವ ಕುರಿತು ಪ್ರಧಾನಿ ನೆತನ್ಯಾಹು ಅವರ ಮುಂದೆ ಅಮೆರಿಕ ಅಧ್ಯಕ್ಷ ಬೈಡನ್ ಪ್ರಸ್ತಾಪ ಇಟ್ಟಿದ್ದರು. ಇದರ ಜೊತೆಗೆ ಗಾಜಾದಲ್ಲಿ ಕದಮ ವಿರಾಮದ ಜೊತೆಗೆ ಅಲ್ಲಿನ ಜನರಿಗೆ ಅಗತ್ಯ ನೆರವು ತಲುಪಿಸುವುದನ್ನು ಹೆಚ್ಚಿಸಲು ನೆರವಾಗುವಂತೆ ಕೋರಿದ್ದರು. ಹಾಗಿದ್ರೆ ಈ ಯುದ್ದ ಶುರುವಾಗಿದ್ದು ಎಲ್ಲಿಂದ ಅನ್ನೋದನ್ನ ನೋಡೋಣ ಬನ್ನಿ.
2023ರ ಅಕ್ಟೋಬರ್‌ನಲ್ಲಿ ಹಮಾಸ್ ಬಂಡುಕೋರರು ಇಸ್ರೇಲ್‌ನ ಗಡಿಯೊಳಕ್ಕೆ ನುಗ್ಗಿ ಮನಬಂದಂತೆ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದರು. ಸುಮಾರು 1,200 ಜನರ ಹತ್ಯೆ ನಡೆದಿತ್ತು ಹಾಗೂ 250 ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಇಸ್ರೇಲ್ ಪಡೆಗಳು ಗಾಜಾ ಮೇಲೆ ಆಕ್ರಮ ಶುರು ಮಾಡಿತ್ತು. ಈವರೆಗೂ ಯುದ್ಧದಿಂದ ಗಾಜಾದಲ್ಲಿ 46 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ನಂತರ ಹಮಾಸ್ ನ ಪ್ರಮುಖ ಉಗ್ರರನ್ನು ಹತ್ಯೆ ಮಾಡಿದ್ದ ಇಸ್ರೇಲ್ ಹಮಾಸ್ ನ ಆರ್ಥಿಕ ಮೂಲಗಳ ಬೇರುಗಳನ್ನು ನಾಶಪಡಿಸಿತ್ತು. ನಂತರ ಕದನ ವಿರಾಮ ಕುರಿತಂತೆ ಮಾತುಕತೆಗಳು ಶುರುವಾಗಿದ್ದವು. ಇದೀಗ ಕದನ ವಿರಾಮಕ್ಕೆ ಹಮಾಸ್ ಮುಂದಾಗಿದೆ. ಇನ್ನು ಒತ್ತೆಯಾಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿವೆ. ಗಾಜಾದೊಳಗೆ ಇನ್ನೂ ಸುಮಾರು 100 ಇಸ್ರೇಲಿ ಒತ್ತೆಯಾಳುಗಳಿದ್ದಾರೆ ಮತ್ತು ಅವರಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಸತ್ತಿದ್ದಾರೆ ಎಂದು ಸೇನೆ ಹೇಳುತ್ತಿದೆ. ಒಟ್ನಲ್ಲಿ ಸುಖಾಸುಮ್ಮನೆ ನಡೆಯುತ್ತಿರೋ ಯುದ್ಧದಿಂದ ಏನೂ ಲಾಭವಿಲ್ಲ, ಆದಷ್ಟು ಜಗತ್ತಲ್ಲಿ ನಡೆಯುತ್ತಿರೋ ಯುದ್ಧಕ್ಕೆ ಬ್ರೇಕ್ ಬೀಳಬೇಕಿದೆ..