ಹಲ್ದ್ವಾನಿಯಲ್ಲಿ ಖರ್ಗೆ ಶುದ್ಧೀಕರಣ ವಿವಾದ – ರಾಹುಲ್ ಗಾಂಧಿ ವಿರುದ್ಧ FIR

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳದ ‘ಶುದ್ಧೀಕರಣ’ ಕುರಿತು ಹೇಳಿಕೆ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಸ್ಸಿ/ಎಸ್ಟಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಪರಿಶಿಷ್ಟ ಜಾತಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಅಮಿತ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ 8ರಂದು ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದಿತ್ತು. ಇದರ ಬಳಿಕ, ಆಗಸ್ಟ್ 11ರಂದು ಕೆಲವರು ಇದೇ ಮೈದಾನದಲ್ಲಿ ಶುದ್ದೀಕರಣ ಯಜ್ಞ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಡಾಕ್ಟರ್ ಸಲಹೆ ಪಡೆಯದೆ ವಿಟಮಿನ್ ಮಾತ್ರೆ ತೆಗೆದುಕೊಳ್ತೀರಾ? – ಎಚ್ಚರ.. ನಿಮಗೆ ಈ ಸಮಸ್ಯೆ ಎದುರಾಗಬಹುದು!
ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಆಗಸ್ಟ್ 29ರಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ‘ಶುದ್ದೀಕರಣ’ ನಡೆಸಿದವರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದ್ದರು.
ಈ ಹೇಳಿಕೆಯ ವಿರುದ್ಧ ಜವಾಹರ್ ನಗರದ ನಿವಾಸಿ ಹಾಗೂ ಶ್ರೀರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಸದಸ್ಯ ಅಮಿತ್ ಕುಮಾರ್ ಅವರು ಹಲ್ದಾನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗಸ್ಟ್ 11ರಂದು ನಡೆದ ಧಾರ್ಮಿಕ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾವು ಉಪಸ್ಥಿತರಿದ್ದುದಾಗಿ ತಿಳಿಸಿರುವ ಅವರು, ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ಈ ಕಾರ್ಯಕ್ರಮಕ್ಕೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರನ್ನು ಅಸ್ಪೃಶ್ಯತೆ ಆಚರಿಸುವವರು ಹಾಗೂ ದಲಿತ ವಿರೋಧಿಗಳು ಎಂದು ರಾಹುಲ್ ಗಾಂಧಿ ಬಿಂಬಿಸಿದ್ದಾರೆ ಎಂದು ಅಮಿತ್ ಕುಮಾರ್ ಆರೋಪಿಸಿದ್ದಾರೆ.

ನೋಡಿರಿ

