ಜ್ಞಾನವಾಪಿ ವಿವಾದ – ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಸಮಿತಿ

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಮುಖಂಡರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಅಲಹಾಬಾದ್ ಹೈಕೋರ್ಟ್ ಜುಲೈ 27 ರಂದು ಎರಡೂ ಕಡೆಯ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ತೀರ್ಪು ಹೊರಬಂದಿದ್ದು, ವೈಜ್ಞಾನಿಕ ಸಮೀಕ್ಷೆಗೆ ಕೋರ್ಟ್ ಸಮ್ಮತಿ ನೀಡಿದೆ. ಈ ಬೆನ್ನಲ್ಲೇ ಕೋರ್ಟ್ನ ಆದೇಶದ ವಿರುದ್ಧ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಎಸ್ಎಲ್ಪಿ (ಸ್ಪೆಷಲ್ ಲೀವ್ ಪೆಟಿಷನ್) ಸಲ್ಲಿಸಿದೆ.
ಎಎಸ್ಐ ಸಮೀಕ್ಷೆಗೆ ಸಂಬಂಧಿಸಿದಂತೆ ಮುಸ್ಲಿಂ ಸಂಘಟನೆ ಪರ ವಕೀಲ ನಿಜಾಮ್ ಪಾಷಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಮುಂದೆ ಪ್ರಸ್ತಾಪಿಸಿದ್ದು, ತಕ್ಷಣ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಕೋರಿದ್ದಾರೆ. ಎಸ್ಎಲ್ಪಿ ಸಲ್ಲಿಕೆ ಕುರಿತು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮಾತನಾಡಿದ್ದು, ಈ ಕೂಡಲೇ ನಾನು ಈ ಮೇಲ್ ಅನ್ನು ಪರಿಶೀಲಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮೊದಲ ಮಹಿಳಾ ಕಾವಡಿಯಾಗಿ ʼದಿ ಎಲಿಫೆಂಟ್ ವಿಸ್ಪರರ್ಸ್ʼ ಖ್ಯಾತಿಯ ಬೆಳ್ಳಿ ನೇಮಕ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಕಾಶಿ ದೇವಾಲಯದ ಮೇಲೆ ನಿರ್ಮಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಮೀಕ್ಷೆಗೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ, ಮುಸ್ಲಿಂ ಸಮಿತಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ ತೀರ್ಪು ಪ್ರಕಟಿಸಿದ ಹೈಕೋರ್ಟ್ ಮುಸ್ಲಿಂ ಸಮಿತಿ ಅರ್ಜಿಯನ್ನು ವಜಾಗೊಳಿಸಿ ಸಮೀಕ್ಷೆಗೆ ಅನುಮತಿಯನ್ನು ನೀಡಿದೆ. ಇದೀಗ ಈ ಆದೇಶವನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದೀಗ ಎಲರ ಕುತೂಹಲ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
ಜುಲೈ 21ರ ಆದೇಶದಲ್ಲಿ, ವಾರಣಾಸಿ ಜಿಲ್ಲಾ ನ್ಯಾಯಾಧೀಶರು 2023ರ ಮೇ ತಿಂಗಳಿನಲ್ಲಿ ನಾಲ್ವರು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯ ಮೇರೆಗೆ ಜ್ಞಾನವಾಪಿ ಸಂಕೀರ್ಣದ ಎಎಸ್ಐ ಮೂಲಕ ಸಮೀಕ್ಷೆಗೆ ನಿರ್ದೇಶಿಸಿದ್ದರು. ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿತ್ತು. ಅಂಜುಮನ್ ಮಸೀದಿ ಸಮಿತಿಯು ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಜುಲೈ 27ರಂದು, ಈ ವಿಷಯವಾಗಿ ವಾದ-ಪ್ರತಿವಾದವನ್ನು ಆಲಿಸಿ, ಆಗಸ್ಟ್ 3ರಂದು ಹೈಕೋರ್ಟ್ ತನ್ನ ಆದೇಶವನ್ನು ನೀಡುವವರೆಗೆ ಸಮೀಕ್ಷೆಯನ್ನು ನಡೆಸಬಾರದೆಂದು ಸೂಚಿಸಿದ್ದರು. ಅದರಂತೆ ಇಂದು, ಹೈಕೋರ್ಟ್ನಿಂದ ಆದೇಶವು ಹೊರಬಿದ್ದಿದ್ದು, ಎಎಸ್ಐ ಮೂಲಕ ಸರ್ವೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.