ಬುಕಿಂಗ್, ಡೆಲಿವರಿ ಟೆನ್ಷನ್ ಬಿಟ್ಟಾಕಿ.. 2 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್ – ಇನ್ಮುಂದೆ ATMನಲ್ಲೇ ಲಭ್ಯ ಎಲ್ ಪಿಜಿ ಸಿಲಿಂಡರ್!

ಬುಕಿಂಗ್, ಡೆಲಿವರಿ ಟೆನ್ಷನ್ ಬಿಟ್ಟಾಕಿ.. 2 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್ – ಇನ್ಮುಂದೆ ATMನಲ್ಲೇ ಲಭ್ಯ ಎಲ್ ಪಿಜಿ ಸಿಲಿಂಡರ್!

ಭಾರತದಲ್ಲಿ ಡಿಜಿಟಲ್ ಕರೆನ್ಸಿ ಬಳಕೆ ಹೆಚ್ಚಾದಂತೆಲ್ಲಾ ಎಟಿಎಂಗಳಿಗೆ ಹೋಗುವವರ ಸಂಖ್ಯೆಯೇ ಕಡಿಮೆ ಆಗಿದೆ. ಫೋನ್ ಪೇ, ಗೂಗಲ್ ಪೇ, ಪೆಟಿಎಂ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಂತೆಲ್ಲಾ ಮೊಬೈಲ್ ನಲ್ಲೇ ಬಹುತೇಕ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ ಎಟಿಎಂಗಳಿಗೆ ಹೋಗಿ ಕ್ಯಾಶ್ ಡ್ರಾ ಮಾಡಿಕೊಂಡು ಬರೋರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇನ್ಮುಂದೆ ನೀವು ಎಟಿಎಂಗಳಿಗೆ ಹೋಗುವ ಸಾಧ್ಯತೆ ಜಾಸ್ತಿ ಇರುತ್ತೆ. ಹಾಗಂತ ಹಣ ಡ್ರಾ ಮಾಡಿಕೊಂಡು ಬರೋಕೆ ಅಲ್ಲ ಎಲ್ ಪಿಜಿ ತುಂಬಿಸಿಕೊಂಡು ಬರೋಕೆ. ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಇದು ಸತ್ಯವೇ.

ಇದನ್ನೂ ಓದಿ : IPL ಉದ್ಘಾಟನಾ ಪಂದ್ಯಕ್ಕೆ ಮಳೆಯ ಶಾಕ್ !- ಚಿನ್ನಸ್ವಾಮಿಯಲ್ಲಿ ನಡೆಯಲ್ವಾ RCB- SRH ಮ್ಯಾಚ್?

ದೇಶಾದ್ಯಂತ ಈಗ ಎಲ್ ಪಿಜಿ ಸಿಲಿಂಡರ್ ಗಳದ್ದೇ ಸದ್ದು, ಸುದ್ದಿ ಎಲ್ಲವೂ. ಅಮೆರಿಕ, ಇಸ್ರೇಲ್ ಹಾಗೇ ಇರಾನ್ ನಡುವಿನ ಯುದ್ಧದಿಂದಾಗಿ ಅನಿಲ-ತೈಲ ಸಾಗಣೆಯಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಸದ್ಯ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುತ್ತಿದ್ದರೂ, ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ಸರಿಯಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ಹೋಟೆಲ್ ಗಳಲ್ಲಿ ಸೌದೆಯ ಮೊರೆ ಹೋಗಿದ್ರೆ ಇನ್ನೂ ಕೆಲ ಹೋಟೆಲ್‌, ರೆಸ್ಟೋರೆಂಟ್‌ಗಳನ್ನ ಮುಚ್ಚಲಾಗಿದೆ. ಇದೆಲ್ಲದರ ನಡುವೆ ಎಲ್‌ಪಿಜಿ ATMವೊಂದು ಉದ್ಘಾಟನೆಯಾಗಿದೆ. ಇಷ್ಟು ದಿನ ಹೇಗೆ ನೀವು ATM ಮಷಿನ್‌ನಲ್ಲಿ ಸುಲಭವಾಗಿ ಆಗಿ ಹಣ ಪಡೆಯುತ್ತಿರೋ, ಹಾಗೇ ಈ ಎಟಿಎಂನಲ್ಲಿ ನಿಮಿಷದೊಳಗೆ ಎಲ್‌ಪಿಜಿ ಸಿಲಿಂಡರ್‌ ಪಡೆಯಬಹುದು.

ಹಣಕ್ಕಾಗಿ ಎಟಿಎಂ ಬಳಸುವ ಕಾಲ ಹೋಗಿ ಈಗ ಗ್ಯಾಸ್ ಸಿಲಿಂಡರ್‌ಗಳಿಗೂ ಎಟಿಎಂ ಬಂದಿದೆ. ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತನ್ನ ಭಾರತ ಗ್ಯಾಸ್ ಗ್ರಾಹಕರಿಗಾಗಿ ದೇಶದ ಮೊದಲ ಎಲ್‌ಪಿಜಿ ಎಟಿಎಂ ಅನ್ನು ಲೋಕಾರ್ಪಣೆ ಮಾಡಿದೆ. ಈ ಸ್ವಯಂಚಾಲಿತ ಯಂತ್ರದ ಮೂಲಕ ಗ್ರಾಹಕರು ಯಾವುದೇ ಏಜೆನ್ಸಿಗೆ ಹೋಗದೆ ಅಥವಾ ಬುಕಿಂಗ್ ಮಾಡಿ ದಿನಗಟ್ಟಲೆ ಕಾಯದೆ, ಕೇವಲ 2 ನಿಮಿಷಗಳಲ್ಲಿ ಸಿಲಿಂಡರ್ ಪಡೆಯಬಹುದು. ಇದು ಪ್ರಾಯೋಗಿಕವಾಗಿ ಆರಂಭವಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಭಾರತದಲ್ಲೇ ಮೊಟ್ಟಮೊದಲ ಎಲ್‌ಪಿಜಿ ಸಿಲಿಂಡರ್‌ ಎಟಿಎಂ ಸ್ಥಾಪನೆಯಾಗಿದ್ದು ಗುರುಗ್ರಾಮದಲ್ಲಿದಲ್ಲಿ. ಸೋಹ್ನಾದ ಸೆಕ್ಟರ್ 33ರಲ್ಲಿರುವ ವಸತಿ ಪಟ್ಟಣದಲ್ಲಿ ಸ್ಥಾಪಿಸಲಾದ ಸ್ವಯಂಚಾಲಿತ ಎಲ್‌ಪಿಜಿ ಮಾರಾಟ ವ್ಯವಸ್ಥೆಯು ಬಳಕೆದಾರರಿಗೆ ಖಾಲಿ ಸಿಲಿಂಡರ್‌ಗಳನ್ನು ತುಂಬಿದ, ಹಗುರವಾದ ಸಂಯೋಜಿತ ಸಿಲಿಂಡರ್‌ಗಳಿಗೆ 2-3 ನಿಮಿಷಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀವಲ್ಲಿ ಖಾಲಿ ಸಿಲಿಂಡರ್‌ ತಂದಿಟ್ಟರೆ, ತುಂಬಿದ ಸಿಲಿಂಡರ್‌ಗಳನ್ನ ತೆಗೆದುಕೊಂಡು ಹೋಗಬಹುದು. ಎರಡು ಮೂರು ನಿಮಿಷಗಳಲ್ಲೇ ರೀ ಫಿಲ್ ಆಗುತ್ತೆ. ಅದೂ ಕೂಡ, ಹಗುರವಾಗಿಯೇ ಇರುತ್ತದೆ.

ಜನವಸತಿ ಜಾಸ್ತಿ ಇರುವ ಪ್ರದೇಶದಲ್ಲಿ ಎಲ್‌ಪಿಜಿ ಎಟಿಎಂ ಸ್ಥಾಪನೆಯಾಗಿದ್ದು, ಈ ಮಷಿನ್‌ ಗ್ರಾಹಕರಿಗೆ ಸಂಪರ್ಕ ರಹಿತ ಅನಿಲ ಮರುಪೂರಣ ವ್ಯವಸ್ಥೆಯನ್ನ ಒದಗಿಸುತ್ತದೆ. 15ಕೆಜಿ ತೂಕದ, ಹಗುರವಾದ ಸಿಲಿಂಡರ್‌ಗಳನ್ನ ವಿತರಿಸುತ್ತದೆ. ಈ ಗ್ಯಾಸ್‌ ಸಿಲಿಂಡರ್‌ ಪಾರದರ್ಶಕವಾಗಿದ್ದು, ಒಳಗಿನ ಅನಿಲ ಮಟ್ಟವನ್ನ ನೀವು ಪರಿಶೀಲಿಸಬಹುದು. ಮತ್ತು ಅತ್ಯಂತ ಸುರಕ್ಷಿತವಾಗಿದೆ. ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, OTP ಮೂಲಕ ಪರಿಶೀಲಿಸಬೇಕು ಮತ್ತು ತಮ್ಮ ಖಾಲಿ ಸಿಲಿಂಡರ್‌ನಲ್ಲಿರುವ ಬಾರ್‌ಕೋಡ್ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ನಂತರ UPI ಮೂಲಕ ಹಣ ಪಾವತಿ ಮಾಡಬೇಕು. ಹಣ ಪಾವತಿ ಆಗುತ್ತಿದ್ದಂತೆ ಆ ಮಷಿನ್‌ ನಿಮ್ಮ ಖಾಲಿ ಸಿಲಿಂಡರ್‌ನ್ನ ಪಡೆದು, ನಂತರ ಅನಿಲ ತುಂಬಿದ ಗ್ಯಾಸ್‌ ಸಿಲಿಂಡರ್‌ ನೀಡುತ್ತದೆ. ಇಷ್ಟು ಮಾಡಲು 2-3 ನಿಮಿಷ ಸಾಕು. ಸದ್ಯ ನೀವು ಗ್ಯಾಸ್‌ ಬುಕ್‌ ಮಾಡಿ, ಅದು ಮನೆ ಬಾಗಿಲಿಗೆ ಡೆಲಿವರಿ ಆಗಲು ತೆಗೆದುಕೊಳ್ಳುವ ಸಮಯಕ್ಕಿಂತ ತುಂಬ ವೇಗವಾಗಿ ಇದೆಲ್ಲ ಆಗಿಬಿಡುತ್ತದೆ. ನಾರ್ಮಲ್ ಸಿಲಿಂಡರ್ ಸುಮಾರು 31 ಕೆಜಿ ತೂಗುತ್ತದೆ, ಆದರೆ ಇವು ಸುಮಾರು 15 ಕೆಜಿ ತೂಗುತ್ತವೆ. ಇನ್ನೊಂದು ದೊಡ್ಡ ಅನುಕೂಲ ಎಂದರೆ ಈ ಎಟಿಎಂ ಕೂಡ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಹಗುರ ಗ್ಯಾಸ್‌ ಆಗಿರೋದ್ರಿಂದ ಮಹಿಳೆಯರೂ ಕೂಡ ಹೋಗಿ ತರಬಹುದು.

Shantha Kumari