ದಾಂಪತ್ಯಜೀವನಕ್ಕೆ ಕಾಲಿಟ್ಟ ನಾಯಿಗಳು! ಸಂಪ್ರದಾಯದಂತೆ ನಡೆದ ಶ್ವಾನಗಳ ಕಲ್ಯಾಣ!
ನಾಯಿಗಳಿಗೆ ಮದುವೆಯ ಭಾಗ್ಯ, ಭರ್ಜರಿ ಭೋಜನ, ಬೊಂಬಾಟ್ ಡ್ಯಾನ್ಸ್..!
ಲಕ್ನೋ: ನಾಯಿಗಳಿಗೂ ಒಂದು ಸಂಸಾರವಿರಲಿ, ಗಂಡ ಹೆಂಡತಿ ಅಂತಾ ಹಾಯಾಗಿರಲಿ ಅಂತಾ ಇಲ್ಲೊಂದು ಕುಟುಂಬ ತಮ್ಮ ನಾಯಿಗೂ ಪಕ್ಕದ ಮನೆ ನಾಯಿಗೂ ಮದುವೆ ಮಾಡಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಉತ್ತರ ಪ್ರದೇಶದ ಗುರುಗ್ರಾಮ್ನಲ್ಲಿ ಇಂಥಾದ್ದೊಂದು ಮದುವೆಯೂ ನಡೆದು ಹೋಗಿದೆ. ಗಂಡು ನಾಯಿ ಶೇರ್ ಹಾಗು ಹೆಣ್ಣು ನಾಯಿ ಸ್ವೀಟಿ ಅಕ್ಕ ಪಕ್ಕದ ಮನೆಯಲ್ಲೇ ಇದ್ವು. ಎರಡು ನಾಯಿಗಳು ತುಂಬಾ ದಿನಗಳಿಂದ ಪರಿಚಯವಾಗಿ ಪ್ರೀತಿಯಲ್ಲೇ ಇದ್ವು. ಎರಡೂ ಮನೆಯ ಮಾಲೀಕರಿಗೂ ಕೂಡಾ ಈ ನಾಯಿಗಳು ಮನೆ ಮಕ್ಕಳಂತೆ ಇದ್ವು. ಹೀಗಾಗಿ ಎರಡೂ ಮನೆಯವರು ಪರಸ್ಪರ ಮಾತಾಡಿಕೊಂಡು ನಾಯಿಗಳಿಗೂ ಸಂಬಂಧ ಕುದುರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮದ್ಯ ಕುಡಿದು ಗಾಢ ನಿದ್ರೆಗೆ ಜಾರಿದ ಆನೆಗಳು: ಎಚ್ಚರಿಸಲು ಹೋದ ಅಧಿಕಾರಿಗಳಿಗೆ ಸುಸ್ತೋ ಸುಸ್ತು…
ಹೆಣ್ಣು ನಾಯಿ ಸ್ವೀಟಿಯನ್ನು ಸಾಕಿದ ಯಜಮಾನಿಗೆ ಮಕ್ಕಳಿಲ್ಲ. ಸ್ವೀಟಿಯೇ ಅವರಿಗೆ ಮನೆ ಮಗು ಥರಾ ಆಗಿತ್ತು. ತಾವು ಸಾಕಿದ ಸ್ವೀಟಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನ್ನ ಪತಿ ದೇವಸ್ಥಾನಕ್ಕೆ ಹೋಗಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಒಂದು ದಿನ ಬೀದಿ ನಾಯಿ ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು. ನಾವು ಅವಳನ್ನ ನಮ್ಮ ಮನೆಯಲ್ಲಿ ಸಾಕಿದ್ದೆವು. ಈಗ ಸ್ವೀಟಿಗೆ ಮದುವೆ ಮಾಡುವ ಸಮಯ ಬಂದಿದೆ. ಅದಕ್ಕಾಗಿ ನೆರೆ ಮನೆಯ ಶೇರ್ ಸ್ವೀಟಿಗೆ ತಕ್ಕ ವರ ಅಂತಾ ತೀರ್ಮಾನಕ್ಕೆ ಬಂದ್ವಿ. ಶೇರ್ ಮನೆಯವರ ಜೊತೆ ಮಾತಾಡಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗ ಸ್ವೀಟಿಗೆ ಹಲ್ದಿಯನ್ನು ಮಾಡಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ..
ಗಂಡು ನಾಯಿ ಶೇರ್ ನನ್ನು ಸಾಕಿದ ಯಜಮಾನಿ ಕೂಡಾ ಈ ಮದುವೆ ವಿಚಾರದ ಬಗ್ಗೆ ಮಾತಾಡಿದ್ದಾರೆ. ಕಳೆದ 8 ವರ್ಷಗಳಿಂದ ಶೇರು ನಮ್ಮ ಜೊತೆಗಿದ್ದಾನೆ. ಆತನನ್ನು ನಾವು ಯಾವಾಗಲೂ ಮಗುವಿನಂತೆ ನೋಡಿಕೊಂಡಿದ್ದೇವೆ. ಈಗ ನಮ್ಮ ಪ್ರೀತಿಯ ಶೇರ್ಗೆ ಮದುವೆ ಮಾಡಲು ಯೋಚಿಸಿದಾಗ ಪಕ್ಕದ ಮನೆಯ ಸ್ವೀಟಿಯೇ ತಕ್ಕ ಜೋಡಿ ಅನಿಸಿದೆ. ಹೀಗಾಗಿ ಸಾಪ್ರದಾಯಿಕವಾಗಿ ಮದುವೆ ಮಾಡಲು ನಿರ್ಧರಿಸಿದೆವು. ಅದರ ಪ್ರಕಾರವಾಗಿಯೇ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡು, ಎಲ್ಲಾ ವಿಧಿ ವಿಧಾನಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಮದುವೆಗೆ ಸುಮಾರು 100 ಜನರನ್ನು ಆಹ್ವಾನಿಸಿದ್ದರು ನಾಯಿಗಳ ಮಾಲೀಕರು. ಹಿಂದೂ ಸಂಪ್ರದಾಯದಂತೆ ನಾಯಿಗಳ ಮದುವೆ ನೆರವೇರಿದ್ದು, ವಿವಾಹ ಸಮಾರಂಭದಲ್ಲಿ ಭರ್ಜರಿ ಭೋಜನದ ಜೊತೆಗೆ ನೃತ್ಯ ಕಾರ್ಯಕ್ರಮವೂ ಜೋರಾಗಿತ್ತು.