ಕಾರು ಚಲಿಸುವಾಗಲೇ ನಾಲ್ವರಿಂದ ಫೈರಿಂಗ್ – ಅಮೆರಿಕದಲ್ಲಿ ಆಟಿಕೆಯ ವಸ್ತುವಾಯ್ತಾ ಪಿಸ್ತೂಲ್..?

ಕಾರು ಚಲಿಸುವಾಗಲೇ ನಾಲ್ವರಿಂದ ಫೈರಿಂಗ್ – ಅಮೆರಿಕದಲ್ಲಿ ಆಟಿಕೆಯ ವಸ್ತುವಾಯ್ತಾ ಪಿಸ್ತೂಲ್..?

ವಿಶ್ವದ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳೋ ಅಮೆರಿಕದಲ್ಲಿ ಪಿಸ್ತೂಲ್ ಅನ್ನೋದು ಆಟಿಕೆಯ ವಸ್ತುವಿನಂತಾಗಿದೆ. ದಿನೇದಿನೆ ಶೂಟೌಟ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ನಿನ್ನೆ ಫ್ಲೋರಿಡಾದಲ್ಲಿ ನಾಲ್ವರು ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ.

ಹೌದು. ಅಮೆರಿಕದಲ್ಲಿ ಗುಂಡಿನ ಮೊರೆತ ನಿಲ್ಲೋ ಲಕ್ಷಣಗಳೇ ಕಾಣ್ತಿಲ್ಲ. ನಿನ್ನೆ ಕೂಡ ಫ್ಲೋರಿಡಾದಲ್ಲಿ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದು, 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ : ಬ್ಯುಸಿನೆಸ್ ಕ್ಲಾಸ್ ಸೀಟ್​ಗಾಗಿ ಪಟ್ಟು – ವಿಮಾನದೊಳಗೆ ನಗ್ನಳಾಗಿ ಓಡಾಡಿದ ಮಹಿಳೆ..!

ನಿನ್ನೆ ಮಧ್ಯಾಹ್ನ 3:43 ಕ್ಕೆ ಅಯೋವಾ ಅವೆನ್ಯೂ ನಾರ್ತ್ ಮತ್ತು ಪ್ಲಮ್ ಸ್ಟ್ರೀಟ್ ಬಳಿಯ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರು ಅಪರಿಚಿತ ಯುವಕರು ನಾಲ್ಕು ಡೋರ್ಗಳಲ್ಲಿ ಕುಳಿತು ಫೈರಿಂಗ್ ಶುರು ಮಾಡಿದ್ದಾರೆ. ಕಾರು ಚಲಿಸುವಾಗಲೇ ಮನಬಂದಂತೆ ಗುಂಡು ಹಾರಿಸಿದ್ದಾರೆ. ಬಳಿಕ ವೇಗವಾಗಿ ಕಾರು ಓಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಗೊಂಡವರೆಲ್ಲರೂ 20 ರಿಂದ 35 ವರ್ಷ ವಯಸ್ಸಿನ ವಯಸ್ಕ ಪುರುಷರು ಎನ್ನಲಾಗಿದೆ. ಹಾಗೇ ಘಟನಾ ಸ್ಥಳದಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಗಾಂಜಾ ಸೇವನೆ ಅಥವಾ ಮಾರಾಟ ನಡೆಯುತ್ತಿತ್ತು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ ಗುಂಡು ಹಾರಿಸಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

suddiyaana