ಇನ್ನು ಮುಂದೆ ಹೊಯ್ಸಳ ಪೊಲೀಸರಿಗೆ ಬಂದೂಕು ಕಡ್ಡಾಯ – ಕಾರಣವೇನು ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಜಾಸ್ತಿ ಆಗುತ್ತಲೇ ಇದೆ. ಪೊಲೀಸರು ಎಷ್ಟು ಕ್ರಮ ಕೈಗೊಂಡ್ರು ಕೂಡ ಅಪರಾಧಗಳನ್ನು ತಡೆಯಲು ಸಾಧ್ಯ ಆಗುತ್ತಿಲ್ಲ. ನಗರದಲ್ಲಿ ಹೊಯ್ಸಳ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿರುತ್ತಾರೆ. ಆದರೂ ಕೂಡ ಅಪರಾಧ ನಿಲ್ಲುತ್ತಿಲ್ಲ. ಮಾರಕಾಸ್ತ್ರಗೊಂದಿಗೆ ಬರುವ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಅಟ್ಯಾಕ್ ಮಾಡುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಗಸ್ತು ಕಾರ್ಯಾಚರಣೆ ನಡೆಸುವ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ಬಂದೂಕು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿದ ಧೋನಿ – CSK ತಂಡಕ್ಕೆ ಹೊಸ ಸಾರಥಿ!
ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ನಿತ್ಯ ಕೊಲೆ, ದರೋಡೆ ಮುಂತಾದ ಪ್ರಕರಣಗಳು ದಾಖಲಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ಅಪರಾಧ ಕೃತ್ಯ ಅಥವಾ ಇತರ ಘಟನೆಗಳು ಸಂಭವಿಸಿದಾಗ ಮೊದಲು ಸ್ಥಳಕ್ಕೆ ತಲುಪುವುದು ಹೊಯ್ಸಳ ಸಿಬ್ಬಂದಿ. ಕೃತ್ಯ ನಡೆಯುವ ಸ್ಥಳದಲ್ಲಿ ಆರೋಪಿಗಳ ಕೈಯಲ್ಲಿ ಮಾರಕಸ್ತ್ರಗಳು ಅಥವಾ ಇತರ ಆಯುಧಗಳಿದ್ದರೆ ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಇಂತಹ ಸಂದರ್ಭಗಳಲ್ಲಿ ಅವರನ್ನು ಬಂಧಿಸುವುದು ಪೊಲೀಸರಿಗೆ ಸಾಧ್ಯವಾಗದೆ ಹೋಗಬಹುದು. ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರ ಬಳಿ ಆಯುಧ ಇರಲೇಬೇಕಾಗುತ್ತದೆ. ಈ ಕಾರಣಕ್ಕೆ ಗನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಭರಣ ಅಂಗಡಿಯೊಂದರಲ್ಲಿ ದರೋಡೆ ನಡೆದಿತ್ತು. ಆ ಸಂದರ್ಭ ಹೊಯ್ಸಳ ಪೊಲೀಸರು ಮೊದಲು ಸ್ಥಳಕ್ಕೆ ತಲುಪಿದ್ದರು. ಆರೋಪಿಗಳ ಕೈಯಲ್ಲಿ ಮಾರಕಾಸ್ತ್ರಗಳಿದ್ದರಿಂದ ಅವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಪ್ರಕರಣದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.