ಹೆಣ್ಣುಮಗುವಿಗೆ ತಂದೆಯಾದ ಖುಷಿ – 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ

ಹೆಣ್ಣುಮಗುವಿಗೆ ತಂದೆಯಾದ ಖುಷಿ – 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ ಅಪ್ಪ

ಹೆಣ್ಣು ಸಮಾಜದ ಕಣ್ಣು ಅನ್ನೋ ಮಾತಿದೆ. ಹೆಣ್ಣನ್ನು ಮನೆಯ ಮಹಾಲಕ್ಷ್ಮೀ ಅಂತಾ ಹೇಳಲಾಗುತ್ತದೆ. ಆದ್ರೆ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ರೆ ಸಾಕು ಯಾಕಾದ್ರೂ ಜನಿಸಿತೋ ಅಂತಾ ಕೆಲವರು ಮುಖ ಸಿಂಡರಿಸಿಕೊಳ್ಳುತ್ತಾರೆ. ಆದ್ರೆ ಈಗ ಕಾಲ ಬದಲಾಗಿದೆ. ಹೆಣ್ಣು ಮಗು ಜನಿಸಿದ್ರೆ ಸಂಭ್ರಮಿಸುತ್ತಾರೆ.. ಮನೆಗೆ ಪುಟ್ಟ ಲಕ್ಷ್ಮೀಯನ್ನು ದೇವರು ಕರುಣಿಸಿದ್ದಾನೆ ಅಂತಾ ಹೇಳುತ್ತಾರೆ. ಇದೀಗ ಇಲ್ಲೊಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಮನೆಗೆ ಮಹಾಲಕ್ಷ್ಮೀ ಬಂದ ಖುಷಿಯಲ್ಲಿ ಮಗುವಿನ ತಂದೆ ವಿಶೇಷವಾಗಿ ಸಂಭ್ರಮಿಸಿದ್ದಾರೆ. ತಮ್ಮ 1.5 ಕೋಟಿ ಕಾರನ್ನು ಆಟಿಕೆಯಂತೆ ಅಲಂಕರಿಸಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಬರೀ 700 ರೂಪಾಯಿಗೆ SUV 700 ಕಾರು ಕೇಳಿದ ಬಾಲಕ! – ವೈರಲ್‌ ಆದ ಪುಟ್ಟ ಪೋರನಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟ ಆನಂದ್ ಮಹೀಂದ್ರಾ!

ಅದೆಷ್ಟೋ ಜನರು ನಮ್ಮ ಮನೆಗೆ ಪುಟ್ಟ ಲಕ್ಷ್ಮಿಯನ್ನು ಕರುಣಿಸು ದೇವರೇ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇನ್ನೂ ಹೆಣ್ಣು ಮಗು ಜನಿಸಿದರಂತೂ  ಸಾಕ್ಷಾತ್ ಲಕ್ಷ್ಮೀ ದೇವಿಯೇ ನಮ್ಮ ಮನೆಗೆ ಆಗಮಿಸಿದ್ದಾಳೆ ಎನ್ನುವಷ್ಟು ಸಂಭ್ರಮಿಸುತ್ತಾರೆ. ಇದೀಗ ಗುಜರಾತಿನ ಸೂರತ್ ನಗರದಲ್ಲಿ ಹೆಣ್ಣು ಮಗು ಹುಟ್ಟಿದ ಖುಷಿಯಲ್ಲಿ ತಂದೆಯೊಬ್ಬರು ತಮ್ಮ ದುಬಾರಿ ಬೆಲೆಯ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಗುಲಾಬಿ ಬಣ್ಣದಲ್ಲಿ ಮೊಡಿಫೈ ಮಾಡಿ ಸಂತೋಷಪಟ್ಟಿದ್ದಾರೆ.

ಕಾರಿನ ವಿಡಿಯೋವನ್ನು @suratupdatesofficial ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್‌ ಮಾಡಲಾಗಿದೆ. “ಸೂರತ್ ನಲ್ಲಿ ತಂದೆಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ಐಷಾರಾಮಿ ಕಾರನ್ನು ಗುಲಾಬಿ ಬಣ್ಣದಿಂದ ಅಲಂಕರಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸೂರತ್ ನ ವ್ಯಕ್ತಿಯೊಬ್ಬರು ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಮ್ಮ ಐಷಾರಾಮಿ ರೇಂಜ್ ರೋವರ್ ಕಾರನ್ನು ಬೇಬಿ ಗರ್ಲ್ ಥೀಮ್ ಗೆ ಅನುಗುಣವಾಗಿ ಸಂಪೂರ್ಣವಾಗಿ ಗುಲಾಬಿ ಬಣ್ಣಕ್ಕೆ ಮೋಡಿಫೈಗೊಳಿಸಿ, ಕಾರಿನ ಸುತ್ತಲೂ ಗೊಂಬೆಗಳನ್ನು ಗ್ರಾಫಿಕ್ ಡಿಸೈನ್ ಮಾಡಿಸಿಕೊಂಡು, ದುಬಾರಿ ಕಾರನ್ನು ಆಟಿಕೆಯಂತೆ ಅಲಂಕರಿಸಿ ಆ ಕಾರಿನಲ್ಲಿ  ನಗರದ ಬೀದಿಗಳಲ್ಲಿ ಸವಾರಿ ಮಾಡುತ್ತಾ ತಮ್ಮ ಖುಷಿಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿರುವ ದೃಶ್ಯವನ್ನು ಕಾಣಬಹುದು.

Shwetha M