ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಹೆರುವುದು ಸಾಮಾನ್ಯವಾಗಿತ್ತು- ಮನುಸ್ಮೃತಿ ಓದಿ ಎಂದ ಗುಜರಾತ್ ಹೈಕೋರ್ಟ್

14 ರಿಂದ 16 ವರ್ಷ ವಯಸ್ಸಿನೊಳಗೆ ಹುಡುಗಿಯರಿಗೆ ಮದುವೆ ಮಾಡುತ್ತಿದ್ದರು ಮತ್ತು 17 ವರ್ಷ ವಯಸ್ಸಿನೊಳಗೆ ಕನಿಷ್ಠ ಒಂದು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು ಎಂದು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಗಳು ಮನುಸ್ಮೃತಿಯನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟಿದ್ದರು. ಇದೀಗ ನ್ಯಾಯಮೂರ್ತಿಗಳ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: 102 ಮಕ್ಕಳಾದ ಮೇಲೆ ಗರ್ಭನಿರೋಧಕ ಮಾತ್ರೆಯ ನೆನಪಾಯ್ತು – ಪಾಪ.. 12 ಪತ್ನಿಯರ ಪಾಡು..!
ಅತ್ಯಾಚಾರಕ್ಕೊಳಗಾಗಿ ಏಳು ತಿಂಗಳ ಗರ್ಭಿಣಿಯಾಗಿದ್ದ 16 ವರ್ಷದ ಬಾಲಕಿಯ ತಂದೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ರು. ಈ ಕುರಿತ ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರಾದ ಸಮೀರ್ ದಾವೆ ಈ ಹಿಂದೆಲ್ಲಾ 14,15 ವರ್ಷದವರಾಗಿದ್ದಾಗಲೇ ವಿವಾಹವಾಗಿ 17 ವರ್ಷವಾಗುವ ಮುನ್ನವೇ ಮಗುವಿಗೆ ಜನ್ಮ ಕೊಡುತ್ತಿದ್ರು. ಈಗ ನಾವು 21ನೇ ಶತಮಾನದಲ್ಲಿರುವ ಕಾರಣ ಅದನ್ನ ಒಪ್ಪಿಕೊಳ್ಳುತ್ತಿಲ್ಲ. ನಿಮ್ಮ ತಾಯಿ ಅಥವಾ ಅಜ್ಜಿ ಬಳಿ ಕೇಳಿ ನೋಡಿ. 14 ರಿಂದ 15 ವರ್ಷದಲ್ಲೇ ಅವರು ವಿವಾಹವಾಗಿದ್ರು. ಬೇಗನೆ ಮಗುವಿಗೂ ಜನ್ಮ ಕೊಟ್ಟಿದ್ರು. ಪುರುಷರಿಗಿಂತ ಮೊದಲೇ ಯುವತಿಯರು ಪ್ರೌಢತೆ ಹೊಂದುತ್ತಾರೆ. ಈ ಬಗ್ಗೆ ಮನುಸ್ಮೃತಿಯಲ್ಲಿ ಉಲ್ಲೇಖವಾಗಿದ್ದು, ಅದನ್ನ ನೀವು ಓದಬೇಕು ಅಂತಾ ನ್ಯಾಯಾಧೀಶರಾದ ಸಮೀರ್ ದಾವೆ ಹೇಳಿದ್ದಾರೆ.
ನ್ಯಾಯಾಧೀಶರಾದ ಸಮೀರ್ ದಾವೆ ಕೂಡ ಮನುಸ್ಮೃತಿಯಲ್ಲಿರುವ ಅಂಶವನ್ನೇ ಪ್ರಸ್ತಾಪಿಸಿ ಈ ಹೇಳಿಕೆ ಕೊಟ್ಟಿದ್ದಾರೆ. ಈ ನಡುವೆ ಗರ್ಭಿಣಿ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇದ್ದಲ್ಲಿ ಅಥವಾ ಆಕೆಯ ಜೀವಕ್ಕೆ ಅಪಾಯವಿದೆ ಅನ್ನೋದಾದ್ರೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಬಹುದು. ಆದ್ರೆ ಈ ಪ್ರಕರಣದಲ್ಲಿ ಗರ್ಭಿಣಿ ಮತ್ತು ಗರ್ಭದೊಳಗಿರುವ ಭ್ರೂಣ ಎರಡೂ ಆರೋಗ್ಯಕರವಾಗಿದ್ದು ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡೋದು ಕಷ್ಟ ಅಂತಾನೂ ಗುಜರಾತ್ ಹೈಕೋರ್ಟ್ ಹೇಳಿದೆ.
ಇಷ್ಟೇ ಅಲ್ಲದೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದೇ ಆದಲ್ಲಿ, ಯಾರು ಅದರ ಆರೈಕೆ ಮಾಡುತ್ತಾರೆ? ಇಂಥಾ ಮಕ್ಕಳನ್ನ ಆರೈಕೆ ಮಾಡಲು ಸರ್ಕಾರ ಏನಾದ್ರೂ ವ್ಯವಸ್ಥೆ ಮಾಡಿದೆಯಾ? ಮಗುವನ್ನ ಯಾರಾದ್ರೂ ದತ್ತು ತೆಗೆದುಕೊಳ್ಳುತ್ತಾರಾ ಅನ್ನೋ ಬಗ್ಗೆ ಪರಿಶೀಲನೆ ನಡೆಸಬೇಕು ಅಂತಾ ಹೈಕೋರ್ಟ್ ಹೇಳಿದೆ. ಈ ನಡುವೆ ಬಾಲಕಿಯ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡುವಂತೆ ಕೋರ್ಟ್ ವೈದ್ಯರಿಗೆ ಸೂಚಿಸಿದ್ದು, ಪ್ರಕರಣದ ವಿಚಾರಣೆಯನ್ನ ಜೂನ್ 15ಕ್ಕೆ ಮುಂದೂಡಿದೆ. ಇಲ್ಲಿ ಹೈಕೋರ್ಟ್ ನ್ಯಾಯಮೂರ್ತಿ, ಸಂವಿಧಾನದ ಅಂಶಗಳನ್ನು ಉಲ್ಲೇಖ ಮಾಡುವ ಬದಲು ಮನುಸ್ಮೃತಿಯನ್ನು ಉಲ್ಲೇಖ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.