ಗುಜರಾತ್ ಚುನಾವಣೆ – 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ
ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯ 182 ಸ್ಥಾನಗಳ ಪೈಕಿ 89 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನಡೆಸುತ್ತಿತ್ತು. ಆದರೆ ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಅಬ್ಬರದ ಪ್ರಚಾರ ನಡೆಸಿ ಬಿಜೆಪಿಗೆ ಮತ್ತೊಂದು ಪ್ರಬಲ ಎದುರಾಳಿಯಾಗಿ ನಿಂತಿದೆ.
ಗುಜರಾತ್ ನಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ ರಾಹುಲ್, ಗುಟ್ಟಾಗಿ ಲಸಿಕೆ ಹಾಕಿಸಿಕೊಂಡಿದ್ರು – ಅಮಿತ್ ಶಾ
ಗುರುವಾರ 89 ವಿಧಾನಸಭಾ ಕ್ಷೇತ್ರಗಳಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಮೊದಲ ಹಂತ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಮೊದಲ ಹಂತದ ವ್ಯಾಪ್ತಿಯಲ್ಲಿ ಒಟ್ಟು 2,39,76,670 ಮತದಾರರು ನೋಂದಣಿಯಾಗಿದ್ದಾರೆ. ಇದರಲ್ಲಿ 1,24,33,362 ಪುರುಷರು, 1,15,42,811 ಮಹಿಳೆಯರು ಮತ್ತು 497 ತೃತೀಯಲಿಂಗಿ ಮತದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 4,91,35,400 ಮತದಾರರು ನೋಂದಣಿಯಾಗಿದ್ದಾರೆ
39 ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25,430 ಮತಗಟ್ಟೆಗಳಿದ್ದು, ಈ ಪೈಕಿ 16,416 ಗ್ರಾಮೀಣ ಪ್ರದೇಶದಲ್ಲಿ ಮತ್ತು 9,014 ಮತಗಟ್ಟೆಗಳು ನಗರ ಪ್ರದೇಶಗಳಲ್ಲಿವೆ. ಮೊದಲ ಹಂತದ ಚುನಾವಣೆಗೆ, ಒಟ್ಟು 34,324 ಬ್ಯಾಲೆಟ್ ಯೂನಿಟ್‌ಗಳು, 34,324 ಕಂಟ್ರೋಲ್ ಯೂನಿಟ್‌ಗಳು ಮತ್ತು 38,749 ವಿವಿಪ್ಯಾಟ್‌ಗಳನ್ನು (ಮತದಾರ ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್) ಬಳಸಲಾಗುತ್ತಿದೆ.