ಉ*ಗ್ರ ಮೊಹಮ್ಮದ್ ಸುಹೈಲ್ ಖಾನ್  ಮನೆ ಮೇಲೆ ದಾಳಿ – ಮಹತ್ವದ ದಾಖಲೆ ವಶ

ಉ*ಗ್ರ ಮೊಹಮ್ಮದ್ ಸುಹೈಲ್ ಖಾನ್  ಮನೆ ಮೇಲೆ ದಾಳಿ – ಮಹತ್ವದ ದಾಖಲೆ ವಶ

ದೇಶಾದ್ಯಂತ ಉಗ್ರ ಜಾಲದ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು, ವಿವಿಧ ಕಡೆ ದಾಳಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಉತ್ತರ ಪ್ರದೇಶ ಪೊಲೀಸರೊಂದಿಗೆ ಸೇರಿ ಲಖಿಂಪುರದಲ್ಲಿ ಶೋಧ ಕಾರ್ಯ ನಡೆಸಿದೆ . ಐಸಿಸ್ ಸಂಬಂಧಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಬಂಧಿತನಾಗಿರುವ ಮೊಹಮ್ಮದ್ ಸುಹೈಲ್ ಖಾನ್   ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಟಿಎಸ್ ಪ್ರಕಾರ ಶೋಧದ ಸಮಯದಲ್ಲಿ ಸುಹೈಲ್ ಖಾನ್ ನಿವಾಸದಿಂದ ಐಸಿಸ್ ಧ್ವಜ ಪತ್ತೆಯಾಗಿದೆ. ಸುಹೈಲ್ ಖಾನ್ ಮತ್ತು ಆತನ ಸಹಚರ ಆಜಾದ್ ಸುಲೇಮಾನ್ ಶೇಖ್ ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕಗಳನ್ನು ಸಾಗಿಸುವ ಸಂಭಾವ್ಯ ಮಾರ್ಗಗಳನ್ನು ಪರಿಶೀಲಿಸಲು ಕಾಶ್ಮೀರಕ್ಕೆ ಪ್ರಯಾಣಿಸಿದ್ದರು ಎಂದು ದೃಢಪಡಿಸಲಾಗಿದೆ. ಈಗಾಗಲೇ ಗುಜರಾತ್ ಎಟಿಎಸ್ ಆಜಾದ್ ಸುಲೇಮಾನ್ ಶೇಖ್, ಮೊಹಮ್ಮದ್ ಸುಹೈಲ್ ಮೊಹಮ್ಮದ್ ಸಲೀಮ್ ಮತ್ತು ಎಂಬಿಬಿಎಸ್ ವೈದ್ಯ ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಎಂಬ ಮೂವರನ್ನು ಬಂಧಿಸಿದೆ. ಈ ಮೂವರು ಕ್ಯಾಸ್ಟರ್ ಬೀನ್ ತ್ಯಾಜ್ಯದಿಂದ ಅತ್ಯಂತ ವಿಷಕಾರಿ ರಾಸಾಯನಿಕ ರಿಸಿನ್ ತಯಾರಿಸುವ ಭಯೋತ್ಪಾದಕ ಮಾಡ್ಯೂಲ್‌ನ ಭಾಗವಾಗಿದ್ದಾರೆ ಎಂದು ಎಟಿಎಸ್ ತಿಳಿಸಿದೆ.

ಇದನ್ನೂ ಓದಿ: ಅಶ್ವಿನಿಯಿಂದ ಕಾಕ್ರೋಚ್‌ ಡಮ್ಮಿ ಆದ್ರಾ? – Elimination ಬೆನ್ನಲ್ಲೇ ಸುಧಿ ಪತ್ನಿ ಗರಂ!

ಅಧಿಕಾರಿಗಳ ಪ್ರಕಾರ ಈ ಉ*ಗ್ರ ತಂಡವು ಡಾ. ಸಯ್ಯದ್ ನೇತೃತ್ವದಲ್ಲಿ ಉಪಕರಣಗಳನ್ನು, ಹರಳೆಣ್ಣೆಯನ್ನು ಸಂಗ್ರಹಿಸಿ ರಿಸಿನ್ ತಯಾರಿಸುವ ಆರಂಭಿಕ ಹಂತದ ಸಂಸ್ಕರಣೆಯನ್ನು ಪ್ರಾರಂಭಿಸಿತ್ತು. ಅಲ್ಲದೆ ಈ ಗುಂಪು ಲಖನೌನಲ್ಲಿರುವ ಆರ್‌ಎಸ್‌ಎಸ್ ಕಚೇರಿ, ದೆಹಲಿಯ ಆಜಾದ್‌ಪುರ ಮಂಡಿ ಮತ್ತು ಅಹಮದಾಬಾದ್‌ನ ಹಲವು ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪರೀಶೀಲನೆ ನಡೆಸಿತ್ತು. ಡಾ. ಸಯ್ಯದ್ ಬಳಿಯಿಂದ ಅಧಿಕಾರಿಗಳು 2 ಗ್ಲಾಕ್ ಪಿಸ್ತೂಲ್‌, 1 ಬೆರೆಟ್ಟಾ, 30 ಜೀವಂತ ಗುಂಡುಗಳು ಮತ್ತು 4 ಲೀಟರ್ ಕ್ಯಾಸ್ಟರ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಈ ಗುಂಪು ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪಿನೊಂದಿಗೆ ಯಾವ ರೀತಿ ಸಂಪರ್ಕ ಸಾಧಿಸಿದೆ ಎನ್ನುವುದನ್ನು ಕಂಡುಕೊಳ್ಳಲು ಪರಿಶೀಲನೆ ಮುಂದುವರಿದಿದೆ.

Kishor KV