ಗುಜರಾತ್ ಚುನಾವಣೆ – ಪತ್ನಿ ಪರ ಪ್ರಚಾರ ನಡೆಸಿ ವಿವಾದದಲ್ಲಿ ಸಿಲುಕಿದ್ರಾ ಜಡೇಜಾ?
ಟೀಂ ಇಂಡಿಯಾ ಜೆರ್ಸಿಯಲ್ಲಿ ಚುನಾವಣಾ ಪ್ರಚಾರ – ಪೋಸ್ಟರ್ ವಿರುದ್ಧ ವ್ಯಾಪಕ ಟೀಕೆ

ಗುಜರಾತ್ ಚುನಾವಣೆ – ಪತ್ನಿ ಪರ ಪ್ರಚಾರ ನಡೆಸಿ ವಿವಾದದಲ್ಲಿ ಸಿಲುಕಿದ್ರಾ ಜಡೇಜಾ?ಟೀಂ ಇಂಡಿಯಾ ಜೆರ್ಸಿಯಲ್ಲಿ ಚುನಾವಣಾ ಪ್ರಚಾರ – ಪೋಸ್ಟರ್ ವಿರುದ್ಧ ವ್ಯಾಪಕ ಟೀಕೆ

ಜಾಮ್‌ನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಹಾಗೂ ಅವರ ಪತ್ನಿ ರಿವಾಬಾ ಜಡೇಜಾ ವಿವಾದದಲ್ಲಿ ಸಿಲುಕಿದ್ದಾರೆ. ರಿವಾಬಾ ಅವರು ತಮ್ಮ ಪ್ರಚಾರ ಪೋಸ್ಟರ್‌ಗಳಲ್ಲಿ ಭಾರತ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟ ಜಡೇಜಾ ಅವರ ಫೋಟೋಗಳನ್ನು ಬಳಸಿರುವುದು ಟೀಕೆಗೆ ಗುರಿಯಾಗಿದೆ.

ರಿವಾಬಾ ಅವರು ರವೀಂದ್ರ ಜಡೇಜಾ ಅವರ ಟೀಂ ಇಂಡಿಯಾ ಜೆರ್ಸಿ ಧರಿಸಿದ ಫೋಟೋ ಬಳಸಿ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದಕ್ಕೆ ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕಿಡಿಕಾರಿದ್ದಾರೆ. ಭಾರತ ಕ್ರಿಕೆಟ್ ತಂಡದ ಸಮವಸ್ತ್ರ ಧರಿಸಿ, ರಾಜಕೀಯ ಪಕ್ಷವೊಂದರ ಪ್ರಚಾರದಲ್ಲಿ ಭಾಗಿಯಾಗುವುದು ಆಟಗಾರನ ಗುತ್ತಿಗೆಯ ಉಲ್ಲಂಘನೆಯಾಗುವುದಿಲ್ಲವೇ? ಜತೆಗೆ ಬಿಸಿಸಿಐ ಪ್ರಕಾರ ಇದು ಹಿತಾಸಕ್ತಿ ಸಂಘರ್ಷವಲ್ಲವೇ? ಎಂದು ಪಠಾಣ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಕೇಜ್ರಿವಾಲ್ ವಿರುದ್ಧ ‘ದಿಲ್ಲಿ ಕಾ ಲಡ್ಕಾ’ಕಾರ್ಟೂನ್ ಟ್ವೀಟ್

ರವೀಂದ್ರ ಜಡೇಜಾ ಭಾರತ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ, ರಾಜಕೀಯ ಪಕ್ಷವೊಂದರ ಪರ ಪ್ರಚಾರ ನಡೆಸುವುದು ಹೇಗೆ ಸಾಧ್ಯ? ಇದಕ್ಕೆ ಅವಕಾಶವಿದೆಯೇ? ಅವರ ಪತ್ನಿ ಭಾರತೀಯ ಜೆರ್ಸಿ ಆಧಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರವೀಂದ್ರ ಜಡೇಜಾ ಅವರು ದೇಶಕ್ಕೆ ಯಾವ ಸಂದೇಶವನ್ನು ನೀಡಲು ಬಯಸಿದ್ದಾರೆ? ರಾಜಕೀಯ ಕಾರ್ಯಸೂಚಿಗಾಗಿ, ನಿರ್ದಿಷ್ಟ ವ್ಯಕ್ತಿಯೊಬ್ಬರ ರಾಜಕೀಯ ಪ್ರಚಾರಕ್ಕಾಗಿ ಭಾರತೀಯ ಜೆರ್ಸಿಯನ್ನು ಬಳಸುವುದು ಸರಿಯಲ್ಲ. ಈ ಬಗ್ಗೆ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಠಾಣ್ ಒತ್ತಾಯಿಸಿದ್ದಾರೆ.

ರಿವಾಬಾ ಅವರು ಜಾಮ್ ನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದ ಸಂದರ್ಭದಿಂದಲೂ ಪತ್ನಿ ಜತೆ ರವೀಂದ್ರ ಜಡೇಜಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿಯೂ ಅವರು ಜೊತೆಗೆ ತೆರಳಿದ್ದರು. ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ವಿಶ್ವಕಪ್ ಸೇರಿದಂತೆ ಇತ್ತೀಚಿನ ಕ್ರಿಕೆಟ್ ಟೂರ್ನಿಗಳಿಂದ ಹೊರಗುಳಿದಿರುವ ಜಡೇಜಾ, ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಕ್ರಿಕೆಟ್ ತಂಡಕ್ಕೆ ಮರಳಿಲ್ಲ. ಈ ಅವಧಿಯಲ್ಲಿ ಅವರು ಪತ್ನಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಅವರ ಕ್ರಿಕೆಟ್ ಸಮವಸ್ತ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ವಿವಾದದ ಬಗ್ಗೆ ರಿವಾಬಾ ಅಥವಾ ರವೀಂದ್ರ ಜಡೇಜಾ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

suddiyaana