ಗುಜರಾತ್ ಚುನಾವಣೆ – ಅತ್ತಿಗೆ ವಿರುದ್ದ ಆರೋಪಗಳ ಸುರಿಮಳೆಗೈದ ಜಡೇಜಾ ಸಹೋದರಿ
ಗಾಂಧಿನಗರ: ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ಕಾವು ಗರಿಗೆದರಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಜಾಮ್‌ನಗರ ಉತ್ತರ ಕ್ಷೇತ್ರ. ಈ ಕ್ಷೇತ್ರದಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯುತ್ತಿದೆ. ಒಂದೆಡೆ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರದಿಂದ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಜಡೇಜಾ ಅವರ ಸಹೋದರಿ ನೈನಾಬಾ ಜಡೇಜಾ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ನಡುವೆ ಪ್ರಚಾರದ ವೇಳೆ ಜಡ್ಡು ತಂಗಿ ಸ್ವತಃ ತಮ್ಮ ಅತ್ತಿಗೆಯ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ.
ರಿವಾಬಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ನೈನಾಬಾ, ರಿವಾಬಾ ಮತದಾರರ ಅನುಕಂಪ ಪಡೆಯುವ ಸಲುವಾಗಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ನ ಹಿರಿಯ ಪದಾಧಿಕಾರಿಗಳು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: “ಬಿಜೆಪಿಯಿಂದ ಬರೀ ಸುಳ್ಳು ಪ್ರಚಾರ”– ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್
6 ವರ್ಷಗಳಲ್ಲಿ ಹೆಸರು ಬದಲಾಯಿಸಲು ಸಮಯವಿಲ್ಲ ಮುಂದುವರೆದು ಮಾತನಾಡಿರುವ ನೈನಾಬಾ, ರಿವಾಬಾ ರಾಜ್‌ಕೋಟ್ ಪಶ್ಚಿಮದ ಮತದಾರೆ. ಹೀಗಿರುವಾಗ ಅವರು ಜಾಮ್‌ನಗರ ಉತ್ತರದಿಂದ ಸ್ಪರ್ಧಿಸಿ ಮತ ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರದಲ್ಲಿ ನನ್ನ ಅತ್ತಿಗೆಯ ನಿಜವಾದ ಹೆಸರು ರಿವಾ ಸಿಂಗ್ ಹರ್ದೇವ್ ಸಿಂಗ್ ಸೋಲಂಕಿ. ಅವರು ರವೀಂದ್ರ ಜಡೇಜಾ ಹೆಸರನ್ನು ಬ್ರಾಕೆಟ್ ನಲ್ಲಿ ಇರಿಸಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಅವರು ಜಡೇಜಾ ಎಂಬ ಉಪನಾಮವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಮದುವೆಯಾಗಿ ಬರೋಬ್ಬರಿ ಆರು ವರ್ಷಗಳು ಕಳೆದಿವೆ. ಆದರೆ ಮತದಾನದ ಪಟ್ಟಿಯಲ್ಲಿ ಹೆಸರು ಬದಲಿಸಿಕೊಳ್ಳಲು ಅವರಿಗೆ ಸಮಯ ಸಿಕ್ಕಿಲ್ಲ ಎಂದು ನೈನಾಬಾ, ರಿವಾಬಾ ಅವರನ್ನು ಟೀಕಿಸಿದ್ದಾರೆ.
ರಿವಾಬಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲವೇ? ಜಾಮ್‌ನಗರ ಉತ್ತರ ವಿಧಾನಸಬಾ ಕ್ಷೇತ್ರ ಕೌಟುಂಬಿಕ ಕಲಹದಿಂದಾಗಿ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಅಲ್ಲದೆ ರಿವಾಬಾ ಜಡೇಜಾ ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇದೇ ವೇಳೆ ಜಡೇಜಾ ಅವರ ಸಹೋದರಿ ಜಾಮ್‌ನಗರ ಉತ್ತರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಸ್ಪರ್ಧಿ ಬಗ್ಗೆ ಮಾತನಾಡಿದ ನೈನಾಬಾ, ವಿಧಾನಸಭೆ ಚುನಾವಣೆಯಲ್ಲಿ ರಿವಾಬಾ ಗೆಲುವಿನ ಸಾಧ್ಯತೆ ಕಡಿಮೆ ಎಂದಿದ್ದಾರೆ.