2 ತಿಂಗಳ ಮಗುವಿಗೆ ಬರೆ ಎಳೆದ ವೈದ್ಯ! – ಕೆಮ್ಮು ಎಂದಿದ್ದಕ್ಕೆ ಹೀಗಾ ಮಾಡೋದು?

2 ತಿಂಗಳ ಮಗುವಿಗೆ ಬರೆ ಎಳೆದ ವೈದ್ಯ! – ಕೆಮ್ಮು ಎಂದಿದ್ದಕ್ಕೆ ಹೀಗಾ ಮಾಡೋದು?

ಪೋರಬಂದರ್:  ದೇಶದಲ್ಲಿ ನಕಲಿ ವೈದ್ಯರಿಗೇನು ಕಡಿಮೆ ಇಲ್ಲ. ಇದರಿಂದಾಗಿ ಅಮಾಯಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಗುಜರಾತ್‌ನ ಪೋರಬಂದರ್ ಜಿಲ್ಲೆಯಲ್ಲಿ ಕೆಮ್ಮಿಗೆ ಚಿಕಿತ್ಸೆ ನೀಡಲು ಎರಡು ತಿಂಗಳ ಹೆಣ್ಣು ಮಗುವಿಗೆ ನಕಲಿ ವೈದ್ಯ ಬಿಸಿಯಾದ ಕಬ್ಬಿಣದ ರಾಡ್‌ನಿಂದ ಬರೆ ಎಳೆದ ಅಮಾನವೀಯ ಘಟನೆ ನಡೆದಿದೆ. ಇದೀಗ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಮೋದಿ ಟೀಕಿಸಿದ್ದ ರಾಹುಲ್ ಗಾಂಧಿಗೆ ನೋಟಿಸ್ – ಬುಧವಾರದ ಡೆಡ್ ಲೈನ್ ನೀಡಿದ್ದೇಕೆ..!?

ಒಂದು ವಾರದ ಹಿಂದೆ ಮಗು ಕೆಮ್ಮು ಮತ್ತು ಕಫದಿಂದ ಬಳಲುತ್ತಿತ್ತು. ಮಗುವಿನ ಪೋಷಕರು ಸ್ಥಳೀಯ ನಾಟಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಮಗು ಕೆಮ್ಮಿನಿಂದ ಗುಣಮುಖವಾಗಿರಲಿಲ್ಲ. ನಂತರ ಮಗುವಿನ ತಾಯಿ ಆ ಮಗುವನ್ನು ದೇವರಾಜಭಾಯ್ ಕಟಾರಾ ಬಳಿಗೆ ಕರೆದೊಯ್ದಿದ್ದಾರೆ. ಈ ವೇಳೆ ನಕಲಿ ವೈದ್ಯ ಮಗುವಿನ ಎದೆ ಮತ್ತು ಹೊಟ್ಟೆಯ ಮೇಲೆ ಬಿಸಿಯಾದ ಕಬ್ಬಿಣದ ರಾಡ್‌ನಿಂದ ಬರೆ ಎಳೆದಿದ್ದಾನೆ. ಅದರಿಂದಲೂ ಪ್ರಯೋಜನವಾಗದಿದ್ದಾಗ  ಪೋಷಕರು ಮಗುವನ್ನು ಪೋರಬಂದರ್‌ನ ಭಾವಸಿಂಹಜಿ ಜನರಲ್ ಆಸ್ಪತ್ರೆಗೆ ಕರೆದೊಯ್ದಾಗ ವಿಚಾರ ಬೆಳಕಿಗೆ ಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಮಹೇದು ತಿಳಿಸಿದ್ದಾರೆ.

ಶಿಶುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ವೈದ್ಯ ಮತ್ತು ಮಗುವಿನ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೋರಬಂದರ್‌ನಲ್ಲಿರುವ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಫೆಬ್ರವರಿ 9 ರಂದು ಉಸಿರಾಟದ ತೊಂದರೆಯೊಂದಿಗೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಐಸಿಯುನಲ್ಲಿಟ್ಟು ಆಕ್ಸಿಜನ್ ನೀಡಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಮಗುವಿನ ಎದೆಯ ಮೇಲೆ ಬರೆ ಎಳೆದಿರುವುದು ಬೆಳಕಿಗೆ ಬಂದಿದೆ ಎಂದು ಜನರಲ್ ಆಸ್ಪತ್ರೆಯ ಡಾ ಜೈ ಬದಿಯಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಾಲಕಿಗೆ ವಾಮಾಚಾರಿ 50ಕ್ಕೂ ಹೆಚ್ಚು ಬಾರಿ ಬಿಸಿಯಾದ ಕಬ್ಬಿಣದ ರಾಡ್‌ ನಿಂದ ಬರೆ ಎಳೆದಿದ್ದ. ನಂತರ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದರು. ಇದರ ಬೆನ್ನಲ್ಲೇ  ಈ ಪ್ರಕರಣ  ಶಹದೋಲ್‌ನಲ್ಲಿ ಬೆಳಕಿಗೆ ಬಂದಿದೆ.

suddiyaana