ಕೇರಳದಲ್ಲಿ ನಿಫಾ ವೈರಸ್ ಆತಂಕ – ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೇರಳದಲ್ಲಿ ನಿಫಾ ವೈರಸ್ ಆತಂಕ – ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೇರಳದಲ್ಲಿ ಈಗ ನಿಫಾ ವೈರಸ್ ಭೀತಿ ಹೆಚ್ಚಾಗಿದೆ. ಇಬ್ಬರನ್ನು ಸೋಂಕು ಬಲಿ ಪಡೆದ ಮೇಲೆ ಕೇರಳದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಇನ್ನು ಕರ್ನಾಟಕ ಸರ್ಕಾರ ಕೂಡಾ ಕೇರಳ ರಾಜ್ಯದ ಗಡಿಭಾಗದಲ್ಲಿರುವ ಜಿಲ್ಲೆಗಳಿಗೂ ಕಟ್ಟುನಿಟ್ಟಿನ ಸುತ್ತೂಲೆ ಹೊರಡಿಸಿದೆ. ಜೊತೆಗೆ ಕೇರಳಕ್ಕೆ ಅನಗತ್ಯ ಓಡಾಟ ಬೇಡ ಅನ್ನೋ ಮೂಲಕ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಆರ್ಭಟ – ಇಬ್ಬರು ಬಲಿ, 6 ಜನರಿಗೆ ಸೋಂಕು

ಕೇರಳದಲ್ಲಿ ನಿಫಾ ಸೋಂಕು ಕಂಡುಬಂದಿರುವ ಪ್ರದೇಶಗಳಿಗೆ ಕರ್ನಾಟಕದಿಂದ ಜನ ಅನಗತ್ಯ ಓಡಾಟ ನಡೆಸದಂತೆ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಕೇರಳದಲ್ಲಿ ಸೋಂಕು ಕಾಣಿಸಿಕೊಂಡ ಕೋಯಿಕ್ಕೋಡ್‌ನ 7 ಗ್ರಾಮಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕೋಯಿಕ್ಕೋಡ್ ನಲ್ಲಿ ನಿಫಾ ವೈರಸ್‌ಗೆ ಇಬ್ಬರು ಬಲಿಯಾಗಿದ್ದಾರೆ. ಅಲ್ಲದೆ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಗ್ರಾಮಗಳ ಜನರ ಓಡಾಟ ನಿರ್ಬಂಧಿಸಿ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ಕೇರಳದ ಸೋಂಕಿತ ಪ್ರದೇಶಕ್ಕೆ ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ

ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಪರಿಶೀಲನೆಗಾಗಿ ಚೆಕ್ ಪೋಸ್ಟ್ ಗಳ ನಿರ್ಮಾಣ

ಕೇರಳದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಫಾ ವೈರಸ್ ಬಗ್ಗೆ ಕಟ್ಟೆಚ್ಚರ ಹಾಗೂ ಜ್ವರ ಪ್ರಕರಣಗಳ ಕುರಿತು ನಿಗಾ ವಹಿಸುವುದು

ನಿಫಾ ಸೋಂಕಿನ ಶಂಕಿತ ಪ್ರಕರಣಗಳ ಕ್ವಾರಂಟೈನ್ ಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 2 ಬೆಡ್ ಗಳನ್ನು ಕಾಯ್ದಿರಿಸುವುದು

ನಿಫಾ ವೈರಸ್ ಸೋಂಕಿನ ಕುರಿತು ಜನಜಾಗೃತಿ ಮೂಡಿಸುವುದು

ಜನ ಪ್ಯಾನಿಕ್ ಆಗದಂತೆ ನೋಡಿಕೊಳ್ಳುವುದು

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತರಬೇತಿ ನೀಡುವುದು

ಜಿಲ್ಲೆಗಳಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡಗಳನ್ನು ಅಲರ್ಟ್ ಮಾಡುವುದು

ಆಸ್ಪತ್ರೆಗಳಲ್ಲಿ ಎಲ್ಲಾ ಔಷಧ ಹಾಗೂ ಆಕ್ಸಿಜನ್ ಇರುವಂತೆ ನೋಡಿಕೊಳ್ಳುವುದು

ಸ್ಯಾಂಪಲ್ ಕಲೆಕ್ಷನ್ ಗಾಗಿ ಪಿಪಿಇ ಕಿಟ್, ಹಾಗೂ ಸ್ಯಾಂಪಲ್ ಸಾಗಾಣೆಗಾಗಿ ಇತರೆ ವ್ಯವಸ್ಥೆ ಇರುವುದಂತೆ ನೋಡಿಕೊಳ್ಳುವುದು

ಶಂಕಿತ ಪ್ರಕರಣ ಇದ್ದರೂ ಸ್ಯಾಂಪಲ್ ಸಂಗ್ರಹಿಸಿ ಎನ್ ಐವಿ ಪುಣೆ ಅಥವಾ ಬೆಂಗಳೂರಿಗೆ ಸಾಗಿಸಲು ಅಗತ್ಯ ಕ್ರಮ ವಹಿಸುವುದು

ಶಂಕಿತ ಸೋಂಕಿತರನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸುವುದು.

Sulekha