ರಾಜಧಾನಿಯಲ್ಲಿ ಹೊಸವರ್ಷಕ್ಕೆ ಸಿದ್ಧತೆ- ಕ್ರಿಸ್‌ಮಸ್, ಹೊಸವರ್ಷಾಚರಣೆಗೆ ಪೊಲೀಸರಿಂದ ಗೈಡ್‌ಲೈನ್ಸ್
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷಕ್ಕೆ ತಯಾರಿ ಜೋರಾಗಿಯೇ ಸಾಗುತ್ತಿದೆ. ಕಳೆದೆರಡು ವರ್ಷಗಳಿಂದ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವ ರೀತಿಯ ಸೆಲೆಬ್ರೇಷನ್ ಇರಲಿಲ್ಲ. ಆದರೀಗ ಸಿಲಿಕಾನ್ ಸಿಟಿ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಸರ್ವರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಹೀಗಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆಯೋಜಕರು, ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಬೆಂಗಳೂರು ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಅಭಿಮಾನಿಗಳು ಗರಂ – ಚಿನ್ನಾ ಪರ್ವಾಗಿಲ್ಲ ಎಂದ ಡಿ ಬಾಸ್
ಡಿಸೆಂಬರ್ 16ರಂದು ಶುಕ್ರವಾರ ಹೋಟೆಲ್, ರೆಸ್ಟೋರೆಂಟ್ ಮಾಲೀಕರೊಂದಿಗೆ ಸಭೆ ನಡೆಸಿದ ಪೊಲೀಸ್ ಇಲಾಖೆ ಕೆಲವು ಗೈಡ್ಲೈನ್ಸ್ ಹೊರಡಿಸಿದೆ. ಕಾರ್ಯಕ್ರಮ ಆಯೋಜಿಸುವ ಕಡೆ ಸಿಸಿ ಕ್ಯಾಮರಾ ಕಡ್ಡಾಯ. ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕ್ರಿಸ್ಮಸ್, ಹೊಸ ವರ್ಷಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯಲು ತಿಳಿಸಲಾಗಿದೆ. ಹಾಗೂ ಭದ್ರತಾ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಪ್ರವೇಶ, ನಿರ್ಗಮನ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸರು ತಿಳಿಸಿದ್ದಾರೆ. ಪಾರ್ಟಿಗಳಲ್ಲಿ ಯಾವುದೇ ರಿತಿಯ ಶಸ್ತ್ರಾಸ್ತ್ರಗಳು, ಡ್ರಗ್ಸ್ ಅಥವಾ ಇತರ ನಿಷೇಧಿತ ವಸ್ತುಗಳನ್ನು ತರಲು ಅನುಮತಿ ನೀಡಬಾರದು. ಈವೆಂಟ್ ಆಯೋಜಕರು ಟ್ರಾವೆಲ್ ಏಜೆನ್ಸಿಗಳೊಂದಿಗೆ ಮಾತನಾಡಿಕೊಂಡು ಪಾರ್ಟಿಗೆ ಬಂದ ಅತಿಥಿ, ಸಿಬ್ಬಂದಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಈವೆಂಟ್ನಲ್ಲಿ ಹೆಚ್ಚು ಜನರಿಗೆ ಅನುಮತಿ ನೀಡುವಂತಿಲ್ಲ. ಹೆಚ್ಚು ಟಿಕೆಟ್ ಸೇಲ್ ಮಾಡುವಂತಿಲ್ಲ. ಹೀಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಕ್ರಮ ಆಯೋಜಕರಿಗೆ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ.