ನಾಯಕರ ನಡುವೆ ‘ಗ್ಯಾರಂಟಿ’ ಗುದ್ದಾಟ – ಫ್ರೀ ಆಫರ್ ಪಡೆಯಲು ಯಾವೆಲ್ಲಾ ಷರತ್ತುಗಳು ಅನ್ವಯ?
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳ ಜಾರಿಯೇ ಸರ್ಕಾರಕ್ಕೆ ಸವಾಲಾಗಿದೆ. ಈಗಾಗಲೇ 200 ಯುನಿಟ್ ಫ್ರೀ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಗ್ಯಾರಂಟಿಗಳ ವಿಚಾರವಾಗಿ ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಕೆಲವೆಡೆ ಜನ ಕೂಡ ಬಿಲ್ ಕಟ್ಟದೆ ಅಧಿಕಾರಿಗಳಿಗೆ ಆವಾಜ್ ಹಾಕುತ್ತಿದ್ದಾರೆ. ಹೀಗಾಗಿ ಇವತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ 5 ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಯ್ತು. ಸಭೆಯಲ್ಲಿ 200 ಯುನಿಟ್ ಫ್ರೀ ವಿದ್ಯುತ್ ಪೂರೈಕೆ ಬಗ್ಗೆಯೇ ಹೆಚ್ಚು ಚರ್ಚೆ ಮಾಡಲಾಯ್ತು. ತಜ್ಞರು ಕೂಡ ಎಲ್ಲರಿಗೂ ಈ ಆಫರ್ ಕೊಟ್ರೆ ಆಗುವ ನಷ್ಟದ ಬಗ್ಗೆ ತಿಳಿಸಿದ್ರು. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ ವಿರೋಧಿಸಿ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ :‘ಗ್ಯಾರಂಟಿ’ಗಳ ಈಡೇರಿಕೆಯೇ ಸರ್ಕಾರಕ್ಕೆ ಸವಾಲು – ‘ಫ್ರೀ’ ಕರೆಂಟ್ ಕೊಟ್ರೆ ಇಷ್ಟೆಲ್ಲಾ ಹೊರೆಯಾಗುತ್ತಾ?
ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬಕ್ಕೆ ಬಿಜೆಪಿಯ ಮಾಜಿ ಶಾಸಕ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸಂಪುಟ ವಿಸ್ತರಣೆಯೂ ಆಯ್ತು, ಖಾತೆ ಹಂಚಿಕೆಯೂ ಆಯ್ತು, ಇನ್ಯಾಕೆ ತಡ? ಅಂದು ಯೋಜನೆ ಘೋಷಣೆ ಮಾಡುವಾಗ ನಿರ್ಬಂಧ ಇರಲಿಲ್ಲ, ಈಗ ಏಕೆ ಕಾರಣ ಹುಡುಕ್ತಿದ್ದೀರಾ? ಸಬೂಬು, ತಕರಾರು ಇಲ್ಲದೆ ಎಲ್ಲಾ ಯೋಜನೆಗಳನ್ನು ಕೂಡಲೇ ಜಾರಿ ಮಾಡಿ ಎಂದು ಚಾಟಿ ಬೀಸಿದ್ದಾರೆ.
ಯೋಜನೆ ಜಾರಿ ಕುರಿತಂತೆ ಮಾತನಾಡಿರುವ ಡಿಕೆಶಿ, ಯಾರೂ ಕೂಡ ಗಾಬರಿಯಾಗೋದು ಬೇಡ. ಊಹಾಪೋಹಗಳಿಗೆ ಜನ ಕಿವಿಗೊಡುವುದು ಬೇಡ ಎಂದಿದ್ದಾರೆ. ಯಾರು ಏನಾದ್ರೂ ಹೇಳಲಿ, ಜನ ಬೈಯಲಿ. ನಾವಂತೂ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೆ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜೂನ್ 1 ರಂದು ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ನಿರ್ಧಾರ ಆಗುತ್ತೆ. ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೇ ಕೊಡುತ್ತೇವೆ. ಆದರೆ ಎಷ್ಟು ಜನ ಓಡಾಡ್ತಾರೆ ಅನ್ನೋ ಬಗ್ಗೆ ಮಾಹಿತಿ ಕೇಳಿದ್ದೇವೆ. ಸ್ಕೂಲ್ ಬಸ್ ಪಾಸ್ ನಂತೆ ಮಹಿಳೆಯರ ಬಸ್‍ಪಾಸ್‍ಗೂ ಇಲಾಖೆಗಳಿಗೆ ಹಣ ಕೊಡ್ತೇವೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಕಂಡೀಷನ್ಸ್ ಇರುತ್ತೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗುವುದಿಲ್ಲ, ಷರತ್ತುಗಳು ಅನ್ವಯ ಆಗಲಿವೆ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ ಎಂದಿದ್ದಾರೆ.