ಜಿಟಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯಲ್ಲಿ ಏನೆಲ್ಲಾ ಬದಲಾವಣೆ? – ಎರಡೂ ತಂಡಗಳ ಬಲಾಬಲ ಹೇಗಿದೆ?

ಜಿಟಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯಲ್ಲಿ ಏನೆಲ್ಲಾ ಬದಲಾವಣೆ? – ಎರಡೂ ತಂಡಗಳ ಬಲಾಬಲ ಹೇಗಿದೆ?

ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಅವ್ರದ್ದೇ ನೆಲದಲ್ಲಿ ಸೋಲಿಸಿದ್ದ ಆರ್​ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಇದೀಗ ಭಾನುವಾರ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು, ಮತ್ತೊಂದು ವಿಜಯದ ನಿರೀಕ್ಷೆಯಲ್ಲಿದೆ. ಹಾಗಾದ್ರೆ ಜಿಟಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ..? ಪ್ಲೇಯಿಂಗ್ 11 ಹೇಗಿರಲಿದೆ..? ಎರಡೂ ತಂಡಗಳ ಬಲಾಬಲ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಸಿಎಂ ಆದ ದಿನವೇ 20 ಸಾವಿರ ಬುಲ್ಡೋಜರ್‌ ಖರೀದಿಸುವೆ! – ಯತ್ನಾಳ್‌ ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಆರ್​ಸಿಬಿ ವಿರುದ್ಧ 300 ರನ್ ಹೊಡೀತಿವಿ, ಬೌಲರ್​ಗಳನ್ನ ಬೆಂಡೆತ್ತುತ್ತೇವೆ ಅಂತಿದ್ದ ಹೈದ್ರಾಬಾದ್ ಪ್ಲೇಯರ್ಸ್​​ಗೆ ಅವ್ರದ್ದೇ ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ರು. ಕಳಪೆ ಬೌಲಿಂಗ್ ಯುನಿಟ್ ಅಂತಾ ಹೀಯಾಳಿಸ್ತಿದ್ದ ಅದೇ ಬೌಲರ್​​ಗಳ ಎದುರು ಬಲಿಷ್ಠ ತಂಡ ಅಂತಾ ಕರೆಸಿಕೊಳ್ತಿದ್ದ ಎಸ್​ಆರ್​ಹೆಚ್ ತಂಡದ ಬ್ಯಾಟ್ಸ್​ಮನ್​ಗಳು ಥರಗೆಲೆಯಂತೆ ಉದುರಿ ಹೋಗಿದ್ರು. ಸದ್ಯ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಮಣಿಸಿರೋ ಜೋಶ್​ನಲ್ಲಿರುವ ಆರ್​ಸಿಬಿ ಪ್ಲೇಯರ್ಸ್ ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ತಂಡವನ್ನ ಎದುರಿಸಲಿದೆ

RCB Vs GT!

ಭಾನುವಾರದ ಪಂದ್ಯದಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 3.30ಕ್ಕೆ ಹೈವೋಲ್ಟೇಜ್ ಮ್ಯಾಚ್ ಶುರುವಾಗಲಿದೆ. ಇದುವರೆಗೂ 9 ಪಂದ್ಯಗಳನ್ನ ಆಡಿರುವ ಆರ್​ಸಿಬಿ ಗೆದ್ದಿರುವುದು ಕೇವಲ 2 ಮ್ಯಾಚ್ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಸೋತಿರುವ RCB ತಂಡ ಭಾನುವಾರ ಗುಜರಾತ್ ಟೈಟಾನ್ಸ್​ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. 2 ಪಂದ್ಯಗಳನ್ನ ಮಾತ್ರ ಗೆದ್ದಿರೋದ್ರಿಂದ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಗುಜರಾತ್ ಟೈಟನ್ಸ್ ತಂಡಕ್ಕೂ ಭಾನುವಾರದ ಗೆಲುವು ಮಹತ್ವದ್ದಾಗಿದೆ. ಯಾಕಂದ್ರೆ ಗುಜರಾತ್ ಟೈಟಾನ್ಸ್ ಕಳೆದ ಎರಡು ಸೀಸನ್​ಗಳಲ್ಲಿ ಯಶಸ್ವಿಯಾಗಿ ಫೈನಲ್ ಪ್ರವೇಶ ಮಾಡಿತ್ತು. 2022ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದು, ಎರಡನೇ ಬಾರಿ ಅಂದ್ರೆ 2023ರಲ್ಲಿ ರನ್ನರ್ ಅಪ್ ಆಗಿತ್ತು. ಆದ್ರೆ ಇದೇ ಮೊದಲ ಬಾರಿಗೆ ಲೀಗ್‌ನಲ್ಲಿ ಜಿಟಿ ಕಳಪೆ ಪ್ರದರ್ಶನ ಎದುರಿಸುತ್ತಿದೆ. ಆಡಿರುವ 9 ಪಂದ್ಯಗಳ ಪೈಕಿ 5ರಲ್ಲಿ ಸೋತಿದ್ದು, 4ರಲ್ಲಿ ಮಾತ್ರ ಗೆಲುವು ಕಂಡಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಫೇಲ್ಯೂರ್ ಆಗ್ತಿದೆ.

ಸದ್ಯ ಎಸ್​ಆರ್​ಹೆಚ್ ವಿರುದ್ಧ ಭರ್ಜರಿ ಫರ್ಪಾಮೆನ್ಸ್ ನೀಡಿರೋದ್ರಿಂದ ಗುಜರಾತ್ ವಿರುದ್ಧದ ಪಂದ್ಯದಲ್ಲಿ  ಆರ್​ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಆರ್​ಸಿಬಿ ತಂಡವು ಎಸ್​ಆರ್​ಹೆಚ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಲಿದೆ ಎನ್ನಲಾಗಿದೆ.  ಆರ್​ಸಿಬಿಯ ಪ್ಲೇಯಿಂಗ್ 11 ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ಈ ಪಂದ್ಯದಲ್ಲೂ ಆರಂಭಿಕನಾಗಿ ಇನಿಂಗ್ಸ್ ಆರಂಭಿಸಲಿದ್ದಾರೆ. ಹಾಗೇ ಭರ್ಜರಿ ಪ್ರದರ್ಶನದ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಕಿಂಗ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಮತ್ತಷ್ಟು ರನ್ ಪೇರಿಸುವ ನಿರೀಕ್ಷೆಯಿದೆ. ಹಾಗೇ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದ ವಿಲ್ ಜಾಕ್ಸ್ ​ಎಸ್​ಆರ್​ಹೆಚ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದಾಗ್ಯೂ ಗುಜರಾತ್ ಟೈಟಾನ್ಸ್ ವಿರುದ್ಧ ಜಾಕ್ಸ್​ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಖಚಿತ. ಇನ್ನು ಮುಂಬೈ ಇಂಡಿಯನ್ಸ್, ಕೆಕೆಆರ್ ಹಾಗೂ ಎಸ್​ಆರ್​ಹೆಚ್​ ವಿರುದ್ಧ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿರುವ ರಜತ್ ಪಾಟಿದಾರ್​ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಎಸ್​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕ್ಯಾಮರೋನ್ ಗ್ರೀನ್ ಗುಜರಾತ್ ಟೈಟಾನ್ಸ್ ವಿರುದ್ಧ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೇ ಟೂರ್ನಿ ಆರಂಭದಿಂದ್ಲೂ ಆರ್​ಸಿಬಿಗೆ ಆಪತ್​ಬಾಂಧವನಾಗಿರೋ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಸ್ಥಾನದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ಎಡಗೈ ಬ್ಯಾಟ್ಸ್​ಮನ್ ಮಹಿಪಾಲ್ ಲೋಮ್ರೊರ್ ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದಾಗ್ಯೂ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.   ಇನ್ನು ಆರ್​ಸಿಬಿ ಪರ ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿರುವ ಕರ್ಣ್ ಶರ್ಮಾ ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಯುವುದು ಖಚಿತ. ಕಳೆದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಮೊಹಮ್ಮದ್ ಸಿರಾಜ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಲಾಕಿ ಫರ್ಗುಸನ್​ಗೆ ಅಹಮದಾಬಾದ್ ಪಿಚ್​ನಲ್ಲಿ ಆಡಿದ ಹೆಚ್ಚಿನ ಅನುಭವವಿದೆ. ಹೀಗಾಗಿ ಆರ್​ಸಿಬಿ ಫರ್ಗುಸನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಆರ್​ಸಿಬಿ ಪರ ಎಡಗೈ ವೇಗಿ ಯಶ್ ದಯಾಳ್ ಕೂಡ ಕಾಣಿಸಿಕೊಳ್ಳುವುದು ಖಚಿತ. ಯಾಕಂದ್ರೆ ಕಳೆದ ಪಂದ್ಯದಲ್ಲಿ ದಯಾಳ್ 3 ಓವರ್​ಗಳಲ್ಲಿ ನೀಡಿದ್ದು ಕೇವಲ 18 ರನ್​ಗಳು ಮಾತ್ರ. ಆರ್​ಸಿಬಿ ತಂಡದ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ವಪ್ನಿಲ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳಿದ ಸ್ವಪ್ನಿಲ್ 12 ರನ್ ಬಾರಿಸಿದ್ದಲ್ಲದೆ, 2 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ವಪ್ನಿಲ್ ಆರ್​ಸಿಬಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಟ್ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಒಟ್ಟಾರೆ ಮೂರು ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಆರ್​ಸಿಬಿ ಒಂದು ಸಲ ಗೆದ್ದಿದ್ರೆ ಗುಜರಾತ್ ಟೈಟಾನ್ಸ್ ಎರಡು ಬಾರಿ ಗೆಲುವು ಕಂಡಿದೆ. ಭಾನುವಾರದ ಪಂದ್ಯ ಎರಡೂ ತಂಡಗಳಿಗೆ ತುಂಬಾನೇ ಮಹತ್ವದ್ದಾಗಿದೆ. ಜಿಟಿ ಟೀಮ್​ನಲ್ಲಿ ಶುಭ್ಮನ್​ ಗಿಲ್ ಉತ್ತಮ ಫಾರ್ಮ್​ನಲ್ಲಿದ್ರು ಇತರೆ ಆಟಗಾರರ ಸಪೋರ್ಟ್ ಸಿಗ್ತಿಲ್ಲ. ಹೀಗಾಗಿ ಅಹಮದಾಬಾದ್ ಸ್ಟೇಡಿಯಮ್​ನಲ್ಲಿ ಯಾರು ಮೋಡಿ ಮಾಡ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.

Shwetha M