ಗುಜರಾತ್ ವಿರುದ್ಧ ಮುಂಬೈಗೆ ರೋಚಕ ಗೆಲುವು – MIಗೆ 20 ರನ್‌ಗಳ ಜಯ

ಗುಜರಾತ್ ಹಾಗೂ ಮುಂಬೈ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಜಿಟಿ ಸೋತಿದೆ. ರೋಹಿತ್ ಶರ್ಮಾ ಬ್ಯಾಟಿಂಗ್, ಮುಂಬೈ ಸಂಘಟಿತ ಬೌಲಿಂಗ್‌ಗೆ ಗುಜರಾತ್ ಟೈಟನ್ಸ್ ಮಕಾಡೆ ಮಲಗಿತು. ಗುಜರಾತ್ ವಿರುದ್ಧ ಮುಂಬೈ 20 ರನ್‌ಗಳ ಜಯ ಸಾಧಿಸಿತು. ಗಿಲ್ ಪಡೆ ಮನೆಗೆ ಹೋದರೆ, ಫೈನಲ್ ಸ್ಥಾನಕ್ಕಾಗಿ ಪಂಜಾಬ್ ವಿರುದ್ಧ ಮುಂಬೈ ಸೆಣಸಲಿದೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು – ದೇಶದ ಅಧಿಕಾರ ತಾತ್ಕಾಲಿಕವಾಗಿ ಬೇರೆಯವರಿಗೆ ಹಸ್ತಾಂತರ
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿತು. 229 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ನಿಗದಿತ ಓವರ್‌ಗೆ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿ 20 ರನ್‌ಗಳ ಸೋಲನುಭವಿಸಿತು.
ಟಾಸ್ ಗೆದ್ದು ಮುಂಬೈ ಮೊದಲು ಬ್ಯಾಟಿಂಗ್ ಮಾಡಿತು. ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ ಉತ್ತಮ ಆರಂಭ ನೀಡಿದರು. ಈ ಜೋಡಿ 7.2 ಓವರ್‌ಗೆ ಮೊದಲ ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿತು. ಬೈರ್‌ಸ್ಟೋವ್ 22 ಬಾಲ್‌ಗೆ 3 ಸಿಕ್ಸರ್, 4 ಫೋರ್‌ಗಳೊಂದಿಗೆ 47 ರನ್ ಕಲೆಹಾಕಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 33 ರನ್ ಗಳಿಸಿ ನಿರ್ಗಮಿಸಿದರು. ಈ ನಡುವೆ ಜವಾಬ್ದಾರಿಯುತ ಆಟವಾಡಿದ ರೋಹಿತ್ 50 ಬಾಲ್‌ಗೆ 4 ಸಿಕ್ಸರ್, 9 ಫೋರ್‌ನೊಂದಿಗೆ 81 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು. ಹಿಟ್ ಮ್ಯಾನ್‌ನ ಎರಡು ಕ್ಯಾಚ್ ಕೈಚೆಲ್ಲಿದ್ದೇ ಗುಜರಾತ್ ಸೋಲಿಗೆ ಪ್ರಮುಖ ಕಾರಣವಾಯತಿಉ. ತಿಲಕ್ ವರ್ಮಾ 25, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (ಔಟಾಗದೇ) 22 ರನ್ ಗಳಿಸಿ ಮುಂಬೈ ಸವಾಲಿನ ಮೊತ್ತ ಪೇರಿಸಲು ನೆರವಾದರು.
ಅಂತಿಮವಾಗಿ ಮುಂಬೈ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿತು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ, ಸಾಯಿ ಕಿಶೋರ್ ತಲಾ 2 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
ಮುಂಬೈ ನೀಡಿದ 229 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್‌ಗೆ ಆರಂಭಿಕ ಆಘಾತ ಎದುರಾಯಿತು. ಮೊದಲ ಓವರ್‌ನಲ್ಲೇ ಕ್ಯಾಪ್ಟನ್ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿ ಹೊರ ನಡೆದಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಹೀಗಿದ್ದರೂ, ಜವಾಬ್ದಾರಿಯುತ ಆಟವಾಡಿದ ಸಾಯಿ ಸುದರ್ಶನ್ 49 ಬಾಲ್‌ಗೆ 10 ಫೋರ್, 1 ಸಿಕ್ಸರ್‌ನೊಂದಿಗೆ 80 ರನ್ ಗಳಿಸಿದರು. ಇವರ ಆಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಈ ಮಧ್ಯೆ ಕುಸಾಲ್ ಮೆಂಡಿಸ್ 20 ರನ್ ಸಿಡಿಸಿ ಪೆವಿಲಿಯನ್ ಕಡೆ ನಡೆದರು. ಆಗ ಸಾಯಿ ಸುದರ್ಶನ್‌ಗೆ ವಾಷಿಂಗ್ಟನ್ ಸುಂದರ್ ಜೊತೆಯಾದರು. ಈ ಜೋಡಿ 44 ಬಾಲ್‌ಗಳಿಗೆ 84 ರನ್‌ಗಳ ಉತ್ತಮ ಜೊತೆಯಾಟ ನೀಡಿತು.
ಆದರೆ, ಜಸ್ಪ್ರಿತ್ ಬುಮ್ರಾ ಎಸೆದ ಯಾರ್ಕರ್‌ಗೆ ಸುಂದರ್ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಅವರ ಬೆನ್ನಲ್ಲೇ ಸುದರ್ಶನ್ ಔಟಾಗಿದ್ದು, ತಂಡದ ಗೆಲುವಿನ ಭರವಸೆಯನ್ನು ನುಚ್ಚುನೂರು ಮಾಡಿತು. ಇನ್ನು ಶೆರ್ಫೇನ್ ರುದರ್ಫೋರ್ಡ್ (24), ರಾಹುಲ್ ತೆವಾಟಿಯಾ (16), ಶಾರುಖ್ ಖಾನ್ (13) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಟ್ರೆಂಟ್ ಬೌಲ್ಟ್ 2, ಜಸ್ಪ್ರಿತ್ ಬುಮ್ರಾ, ರಿಚರ್ಡ್ ಗ್ಲೀಸನ್, ಮಿಚೆಲ್ ಸ್ಯಾಂಟ್ನರ್, ಅಶ್ವನಿ ಕುಮಾರ್ ತಲಾ 1 ವಿಕೆಟ್ ಪಡೆದರು.