ರಾಜಸ್ಥಾನದಲ್ಲಿ ಅತಿ ದೊಡ್ಡ ಲೀಥಿಯಂ ನಿಕ್ಷೇಪ ಪತ್ತೆ – ಚೀನಾ ಮೇಲಿನ ಅವಲಂಬನೆ ತಗ್ಗಿಸುತ್ತಾ?
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ ಮೊದಲ ಬೃಹತ್ ಪ್ರಮಾಣದ ಲೀಥಿಯಂ ನಿಕ್ಷೇಪಗಳು ಪತ್ತೆಯಾಗಿದ್ದು ತೀವ್ರ ಸಂಚಲನ ಮೂಡಿಸಿತ್ತು. ಇದೀಗ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಕೂಡ ಲೀಥಿಯಂ ನಿಕ್ಷೇಪದ ಕುರುಹುಗಳು ಕಾಣಿಸಿವೆ. ಇವು ಜಮ್ಮು ಕಾಶ್ಮೀರದಲ್ಲಿ ದೊರೆತ ನಿಕ್ಷೇಪಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3 ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಸುಮಾರು 59 ಲಕ್ಷ ಟನ್ ಲಿಥಿಯಂ ನಿಕ್ಷೇಪ ಪತ್ತೆ ಮಾಡಲಾಗಿತ್ತು. ಇದಾಗಿ 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ದೇಶದ 80%ರಷ್ಟು ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವಿದೆ ಎಂದು ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗೌರ್ ಜಿಲ್ಲೆಯ ದೇಗಾನಾ ಪ್ರದೇಶದಲ್ಲಿ ಈ ಲೀಥಿಯಂ ಪತ್ತೆಯಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪವನ್ನು ಆವಿಷ್ಕರಿಸಿದೆ. ಲೀಥಿಯಂ ನಿಕ್ಷೇಪಗಳ ಸಾಮರ್ಥ್ಯವು ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವದಲ್ಲಿರುವ ನಿಕ್ಷೇಪಗಳಿಗಿಂತ ಹೆಚ್ಚು ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ – ಸಿಲಿಕಾನ್ ಸಿಟಿಯಲ್ಲಿ 5 ಮನೆಗಳು ಕುಸಿತ, ಕಾರುಗಳು ಜಖಂ
ಈ ಪ್ರಮುಖ ಆವಿಷ್ಕಾರವು ಚೀನಾದ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಈ ಅಮೂಲ್ಯ ನಿಧಿ ಈಗ ದೇಶದ ಅತಿದೊಡ್ಡ ಲೀಥಿಯಂ ನಿಕ್ಷೇಪ ಎಂದು ಹೇಳಲಾಗುತ್ತಿದೆ. ಅದರ ಆವಿಷ್ಕಾರದಿಂದ, ಅದಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಭರವಸೆಯ ಅಲೆ ಮೂಡಿದೆ.
ದೇಶದಲ್ಲಿ ಲೀಥಿಯಂ ನಿಕ್ಷೇಪಗಳು ಮತ್ತು ಉತ್ಪಾದನೆಯು ಎಲೆಕ್ಟ್ರಿಕ್ ವಾಹನಗಳ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ EV ವಾಹನ ಮಾರುಕಟ್ಟೆ ಮತ್ತು ಅದರ ಗ್ರಾಹಕರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿದೆ. ರಾಜಸ್ಥಾನದ ಜೊತೆಗೆ ಜಮ್ಮು-ಕಾಶ್ಮೀರ, ಮೇಘಾಲಯ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಲಿಥಿಯಂ ಹುಡುಕಾಟ ನಡೆಯುತ್ತಿದೆ. ಭಾರತವು ಇನ್ನೂ ಲೀಥಿಯಂಗಾಗಿ ಚೀನಾವನ್ನು ಅವಲಂಬಿಸಿದೆ. ಆದರೆ, ರಾಜಸ್ಥಾನದಲ್ಲಿ ಈ ನಿಕ್ಷೇಪ ಪತ್ತೆಯಾಗುವುದರೊಂದಿಗೆ ಚೀನಾದ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಲೀಥಿಯಂ ಒಂದು ನಾನ್-ಫೆರಸ್ ಲೋಹವಾಗಿದೆ, ಇದನ್ನು ಮೊಬೈಲ್-ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ವಾಹನ ಮತ್ತು ಇತರ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಭಾರತವು ಲೀಥಿಯಂಗಾಗಿ ದುಬಾರಿ ವಿದೇಶಿ ಪೂರೈಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.