ಗೃಹಲಕ್ಷ್ಮೀ ಯೋಜನೆ ದುಡ್ಡು ಜಮೆಯಾಗದ ಮಹಿಳೆಯರ ಮನೆಬಾಗಿಲಿಗೆ ಬಂದು ದಾಖಲೆ ಸಂಗ್ರಹ

ಗೃಹಲಕ್ಷ್ಮೀ ಯೋಜನೆ ದುಡ್ಡು ಜಮೆಯಾಗದ ಮಹಿಳೆಯರ ಮನೆಬಾಗಿಲಿಗೆ ಬಂದು ದಾಖಲೆ ಸಂಗ್ರಹ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದುಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಹಂತಹಂತವಾಗಿ ಜಾರಿ ಮಾಡಿದೆ. ಆದರೆ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ನೀಡುವ ಗೃಹಲಕ್ಷ್ಮೀ ಯೋಜನೆಗೆ ನಾನಾ ಸವಾಲುಗಳು ಎದುರಾಗುತ್ತಿದೆ. ತಾಂತ್ರಿಕ ದೋಷದಿಂದಾಗಿ ಹಲವು ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಇದೀಗ ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ದೋಷ ನಿವಾರಣೆಗಾಗಿ ಮನೆಬಾಗಿಲಲ್ಲಿ ದಾಖಲೆ ಸಂಗ್ರಹಕ್ಕೆ ಇಲಾಖೆ ರೆಡಿಯಾಗಿದೆ.

ಇದನ್ನೂ ಓದಿ: ಅಮ್ಮಂದಿರ ಆಲೆಮನೆ ಆಪರೇಷನ್ – ಹೆಣ್ಣು ಭ್ರೂಣ ಕೊಂದವರ ಲೆಕ್ಕವೇನಿತ್ತು?

ತಾಂತ್ರಿಕ ದೋಷದ ಪರಿಣಾಮ ಬರೋಬ್ಬರಿ 5-6 ಲಕ್ಷದಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ದುಡ್ಡು ಜಮೆಯಾಗಿಲ್ಲ. ಗೃಹಲಕ್ಷ್ಮೀ ಗ್ಯಾರಂಟಿ ಜಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿನಕ್ಕೊಂದು ಕಸರತ್ತು ನಡೆಸುತ್ತಿದೆ. ಇದೀಗ ಇಲಾಖೆ ಗ್ರಾಮ-ಗ್ರಾಮಗಳಲ್ಲಿ ಅದಾಲತ್‌ಗೆ ತಯಾರಾಗಿದೆ. ಆದರೆ ಅದಾಲತ್‌ಗೂ ಮುನ್ನಾ ಅಂಗನವಾಡಿ ಕಾರ್ಯಕರ್ತೆಯರು ಖುದ್ದು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳ ಕಾರಣ ಹುಡುಕಿ ಪೂರಕ ದಾಖಲೆ ಕಲೆಹಾಕಲಿದ್ದಾರೆ. ಸುಮಾರು 5-6 ಲಕ್ಷದಷ್ಟು ಗೃಹಲಕ್ಷ್ಮೀ ದುಡ್ಡು ಜಮೆಯಾಗದ ಯಜಮಾನಿಯರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಅವರಿಗೆ ಹಣ ತಲುಪಲು ಕ್ರಮ ವಹಿಸಲಾಗುತ್ತಿದೆ.

ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ದುಡ್ಡು ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಸಿಎಂ ಟಾರ್ಗೆಟ್ ಕೊಟ್ಟಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ತರಿಸಿಕೊಂಡು, ಬಳಿಕ ಅದಾಲತ್ ಮೂಲಕ ದುಡ್ಡು ಜಮೆಯಾಗುವಂತೆ ಇಲಾಖೆ ನೋಡಿಕೊಳ್ಳಲಿದೆ.

Shwetha M