ರಾಜ್ಯಕ್ಕೆ ಬರದ ಬರೆ – ಕಾವೇರಿ ತವರು ಕೊಡಗಿನಲ್ಲಿ ಕುಸಿಯುತ್ತಿದೆ‌ ಅಂತರ್ಜಲ ಮಟ್ಟ

ರಾಜ್ಯಕ್ಕೆ ಬರದ ಬರೆ – ಕಾವೇರಿ ತವರು ಕೊಡಗಿನಲ್ಲಿ ಕುಸಿಯುತ್ತಿದೆ‌ ಅಂತರ್ಜಲ ಮಟ್ಟ

ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು, ಬರದ ಛಾಯೆ ಮೂಡಿದೆ. ಜಲಾಶಯಗಳು ಭರ್ತಿಯಾಗದೇ ನೀರಿನ ಅಭಾವ ಕಾಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ಸರಿಯಾದ ಪ್ರಮಾಣ ನೀರು ಸಿಗದೇ ಬೆಳೆದ ಬೆಳೆ ನೆಲಕಚ್ಚಿವೆ. ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದಾಗಿ ಜಲಾಶಯಗಳ ಮೇಲೆ ಮಾತ್ರವಲ್ಲ ನದಿಗಳ ಮೇಲೂ ಎಫೆಕ್ಟ್‌ ಬಿದ್ದಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಕಾಡುತ್ತಿದೆ.

ಇದನ್ನೂ ಓದಿ: ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ!

ಹೌದು, ಕೊಡಲು ಜಿಲ್ಲೆಯಲ್ಲೂ ಮಳೆ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಕಾವೇರಿ ತವರು ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲೇ ಕಳೆದ ತಿಂಗಳಿಂದಲೇ ನೀರು ಬತ್ತುತ್ತಿದ್ದು, ಹರಿವ ನೀರಿಗೆ ತಡೆಯೊಡ್ಡಿ ಭಕ್ತರಿಗೆ ಸ್ನಾನಕ್ಕೆ ಸೌಕರ್ಯ ಕಲ್ಪಿಸಲಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಜಲ ಮೂಲಗಳು ಉದ್ಭವವಾಗಿದ್ದು ಅವೂ ಬತ್ತುತ್ತಿವೆ. ಕೆಲವೆಡೆ ಗದ್ದೆಗಳು ಒಣಗಿ ಗದ್ದೆ ಬಿರುಕು ಬಿಟ್ಟಿದೆ. ಇದರಿಂದಾಗಿ ಕಾವೇರಿ ನದಿತೀರದ ಪ್ರದೇಶಗಳಲ್ಲಿ ಈ ವರ್ಷ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಕಾವೇರಿ ನದಿ ಹರಿವಿನ ತಾಣಗಳಾದ ಭಾಗಮಂಡಲ, ಪುಲಿಕೋಟು, ಪಾಲೂರು, ನಾಪೋಕ್ಲು, ಬಲಮುರಿ, ಬೇತ್ರಿ ಸೇರಿದಂತೆ ಎಲ್ಲೆಡೆ ನೀರಿನ ಹರಿವು ತಗ್ಗಿದೆ.

ಕೊಡಗಿನಲ್ಲಿ ಹತ್ತು ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಅಂತರ್ಜಲದ ಪ್ರಮಾಣ ಪ್ರಸಕ್ತ ಸಾಲಿನಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ. ನದಿ ಪಾತ್ರಗಳಲ್ಲಿನ ಗದ್ದೆಗಳು ಮಳೆಗಾಲದಲ್ಲೇ ಬತ್ತಿವೆ. ನದಿ ಹರಿವಿನ ತಾಣಗಳಲ್ಲಿ ಕಣ್ಣಾಡಿಸಿದರೆ ನದಿಗೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಹೆಚ್ಚಾಗಿ ಅಂತರ್ಜಲದ ಮಟ್ಟ ಕುಸಿತವಾಗುತ್ತಿದೆ. ಜಿಲ್ಲೆಯಲ್ಲಿ ಇರುವ ತೋಡುಬಾವಿಗಳ ಅಂತರ್ಜಲ ಮಟ್ಟ ಅಂತರ್ಜಲ ಸ್ಥಿರ ಜಲಮಟ್ಟದಿಂದ 0.70 ಮೀಟರ್‌ನಷ್ಟು ಕುಸಿದಿದೆ. ಕೊಳವೆಬಾವಿಗಳ ಮಟ್ಟವೂ ಇದೇ ಬಗೆಯಲ್ಲಿ ಕಡಿಮೆಯಾಗಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆಗೂ ಮುನ್ನವೇ ಕೊಡಗು ಜಿಲ್ಲೆಯ ತೋಡುಬಾವಿಗಳು ಮಾತ್ರವಲ್ಲ ಕೊಳವೆಬಾವಿಗಳೂ ಬತ್ತುವ ಆತಂಕ ಎದುರಾಗಿದೆ.

Shwetha M