ಮದುವೆಗೆ ನಾಲ್ಕು ದಿನವಿರುವಾಗಲೇ ವರನಿಗೆ ಡೆಂಘೀ ಜ್ವರ – ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ!
ಪ್ರತಿಯೊಬ್ಬರಿಗೂ ತನ್ನ ಮದುವೆಯ ಬಗ್ಗೆ ಕನಸಿರುತ್ತದೆ. ಅದ್ಧೂರಿಯಾಗಿ ಮದುವೆ ಅಲ್ಲದಿದ್ರು ಸರಳವಾಗಿ ಸಂಭ್ರಮದಲ್ಲಿ ಮದುವೆ ಆಗಬೇಕೆನ್ನುವ ಕನಸಿರುತ್ತದೆ. ಇನ್ನು ಮದುವೆ ಆಗಲು ಮದುವೆಗೆ ಕಾಲ ಕೂಡಿಬರಬೇಕು ಅಂತಾರೆ. ಹೀಗೆ ಕಾಲ ಕೂಡಿ ಬರುವಾಗ ಕೆಲವೊಮ್ಮೆ ವಿಘ್ನಗಳು ಎದುರಾಗವುದು ಸಹಜ. ಹಾಗಂತ ಮೂಹೂರ್ತ ತಪ್ಪಿಸಲು ಸಾಧ್ಯವೇ? ಖಂಡಿತ ಇಲ್ಲ. ಇಲ್ಲೊಬ್ಬ ಯುವಕನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರನ್ನೂ ಆಮಂತ್ರಿಸಿ ಆಗಿತ್ತು. ಅದ್ಧೂರಿ ಮದುವೆಗೆ ತಯಾರಿಯೂ ನಡೆದಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು.. ಮದುವೆಗೆ ನಾಲ್ಕು ದಿನ ಮಾತ್ರ ಬಾಕಿ. ಅಷ್ಟರಲ್ಲೇ ವರನಿಗೆ ಡೆಂಘೀ ಎಂಬ ಮಹಾಮಾರಿ ವಕ್ಕರಿಸಿಕೊಂಡಿತ್ತು. ಇದೀಗ ಆತ ಆಸ್ಪತ್ರೆಯಲ್ಲೇ ಮದುವೆಯಾಗಿದ್ದಾನೆ.
ಹೌದು, ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಮದುವೆ ನಾಲ್ಕು ದಿನ ಬಾಕಿ ಉಳಿದಿರುವಾಗಲೇ ವರನಿಗೆ ಡೆಂಘೀ ಕಾಣಿಸಿಕೊಂಡಿದೆ. ಆಸ್ಪತ್ರೆ ದಾಖಲಾದ ವರನ ಪ್ಲೇಟ್‌ಲೇಟ್ ದಿನದಿಂದ ದಿನಕ್ಕೆ ಕುಸಿದಿದೆ. ಅತ್ಯಂತ ಅಪಾಯದ ಘಟಕ್ಕೆ ವರ ತಲುಪಿದ್ದಾನೆ. ಆದರೆ ಮುಹೂರ್ತ ತಪ್ಪಿಸಲು ಮನಸ್ಸಾಗಲಿಲ್ಲ. ನಿಗದಿಯಾದ ದಿನಾಂಕದಂದೇ ಆಸ್ಪತ್ರೆಯ ಮೀಟಿಂಗ್ ಹಾಲ್‌ನಲ್ಲಿ ಮದುವೆಯಾಗಿದ್ದಾನೆ.
ನ.27 ರಂದು ವಿವಾಹ ನಡೆಯಬೇಕಿತ್ತು. ಆದರೆ ವರ ಆಸ್ಪತ್ರೆ ದಾಖಲಾಗಿದ್ದರಿಂದ ವಧು – ವರನ ಕುಟುಂಬಸ್ಥರು ನಿಗದಿಪಡಿಸಿದ ದಿನವೇ ವಿವಾಹ ಮಾಡಿಸುವ ಸಲುವಾಗಿ ಅಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಎರಡು ದಿನದ ಬಳಿಕ ಎರಡೂ ಮನೆಯವರು ಆಸ್ಪತ್ರೆಯಲ್ಲಿ ಮಾತನಾಡಿಕೊಂಡು ಆಸ್ಪತ್ರೆಯ ಮೀಟಿಂಗ್ ಹಾಲ್‌ನಲ್ಲಿ ಮದುವೆ ಮಂಟಪ ಸಿದ್ದಪಡಿಸಿದ್ದಾರೆ. ವಧುವನ್ನು ಕರೆತಂದು ಕುಟುಂಬದವರ ಸಮ್ಮುಖದಲ್ಲಿ ನಿಗದಿಪಡಿಸಿದ ಮಹೂರ್ತದಲ್ಲೇ ವಿವಾಹ ಮಾಡಿಸಿದ್ದಾರೆ. ಗಾಜಿಯಾಬಾದ್‌ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ವಿಶೇಷ ವಿವಾಹ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋ ವೈರಲ್ ಆಗಿದೆ.