ಗ್ರಾಮೀಣ ಭಾಗಗಳಲ್ಲಿ ಗೃಹಜ್ಯೋತಿ ಯೋಜನೆಗೆ ನೀರಸ ಪ್ರತಿಕ್ರಿಯೆ – ಮನೆಗಳಿಗೆ ತೆರಳಿ ನೋಂದಣಿಗೆ ಚಿಂತನೆ

ಗ್ರಾಮೀಣ ಭಾಗಗಳಲ್ಲಿ ಗೃಹಜ್ಯೋತಿ ಯೋಜನೆಗೆ ನೀರಸ ಪ್ರತಿಕ್ರಿಯೆ – ಮನೆಗಳಿಗೆ ತೆರಳಿ ನೋಂದಣಿಗೆ ಚಿಂತನೆ

ಬೆಂಗಳೂರು: ಜೂ 18 ರಂದು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಗ್ರಾಹಕರು ಹತ್ತಿರದ ಸೇವಾ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನುಮುಂದೆ ಗ್ರಾಹಕರು ಇದ್ದಲ್ಲಿಗೆ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ತೆರಳಿ ನೋಂದಣಿ ಮಾಡಿಕೊಳ್ಳಲಿದ್ದು, ಈ ಬಗ್ಗೆ ಚಿಂತನೆ ನಡೆಸುತ್ತಿವೆ.

“ಗೃಹಜ್ಯೋತಿ’ಗಾಗಿ ಜೂ. 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಕರ್ನಾಟಕ ಒನ್‌, ಗ್ರಾಮ ಒನ್‌ ಮತ್ತು ಬೆಂಗಳೂರು ಒನ್‌ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಬರೋಬ್ಬರಿ 1.02 ಕೋಟಿ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ನಗರ ಪ್ರದೇಶದ ನಿವಾಸಿಗಳ ಪ್ರಮಾಣ ಹೆಚ್ಚಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಂದಗತಿಯಿಂದ ಸಾಗುತ್ತಿದೆ. ಈ ಹಿನ್ನೆಲೆ ಅಗತ್ಯಬಿದ್ದರೆ ಗ್ರಾಹಕರಿದ್ದಲ್ಲಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಲು ಎಸ್ಕಾಂಗಳು ಚಿಂತನೆ ನಡೆಸಿವೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಮುಂದಾದ ಬಿಬಿಎಂಪಿ‌ – ಆಹಾರ, ಸ್ವಚ್ಛತೆ ನೋಡಿಕೊಳ್ಳಲು ಅಧಿಕಾರಿ ನೇಮಕ

ಬೆಸ್ಕಾಂ ನಿರ್ದೇಶಕ (ಹಣಕಾಸು) ಜೆ. ದರ್ಶನ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊನೆಯ ದಿನಾಂಕ ನಿಗದಿಪಡಿಸದಿರುವುದರಿಂದ ಸಾಕಷ್ಟು ಸಮಯ ಇದೆ. ಅವಕಾಶ ಸಿಕ್ಕಾಗ ಗ್ರಾಹಕರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗಗಳಲ್ಲಿ ಇದರ ಬಗ್ಗೆ ಅರಿವಿಲ್ಲದ, ಗೊತ್ತಿದ್ದರೂ ನೋಂದಣಿ ಮಾಡಿಕೊಳ್ಳಲಾಗದ ಅಥವಾ ಸಾಧ್ಯವಾಗದ ವರ್ಗಗಳನ್ನು ತಲುಪುವ ಆವಶ್ಯಕತೆ ಇದೆ. ಅಗತ್ಯ ಬಿದ್ದರೆ ಗ್ರಾಹಕರಿದ್ದಲ್ಲಿಯೇ ನಮ್ಮ ಮೀಟರ್‌ ರೀಡರ್‌ಗಳು ಅಥವಾ ಗ್ರಾಮ ವಿದ್ಯುತ್‌ ಪ್ರತಿನಿಧಿಗಳು ತೆರಳಿ, ನೋಂದಣಿ ಮಾಡಿಸಿ ಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಬ್ಬ ಮೀಟರ್‌ ರೀಡರ್‌ ಒಂದು ದಿನಕ್ಕೆ 250 ಮನೆಗಳ ರೀಡಿಂಗ್‌ ಮಾಡುತ್ತಾರೆ. ಹತ್ತು ದಿನಗಳಲ್ಲಿ ಒಬ್ಬ ಸಿಬಂದಿ 2,500 ಮನೆಗಳನ್ನು ಸಂಪರ್ಕಿಸುತ್ತಾರೆ. ಅಗತ್ಯ ನೋಡಿ ಕೊಂಡು ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ತಲುಪುವ ಕೆಲಸವೂ ನಡೆಯಲಿದೆ ಎಂದು ದರ್ಶನ್‌ ಹೇಳಿದ್ದಾರೆ.

suddiyaana