ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಐದನೇ ದಿನವೂ ವಿಘ್ನ – ಸರ್ವರ್ ಸಮಸ್ಯೆಯಿಂದ ಸಿಬ್ಬಂದಿ ಸುಸ್ತು
ಬೆಂಗಳೂರು: 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ನೋಂದಣಿ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದೆ. ಐದನೇ ದಿನವೂ ಕೂಡ ಸೇವಾಸಿಂಧು ಪೋರ್ಟಲ್‌ನಲ್ಲಿ ಸರ್ವರ್ ಸಮಸ್ಯೆ ಮುಂದುವರೆದಿದೆ. ಇದರಿಂದಾಗಿ ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಗಿದೆ.
ಬೆಳಗ್ಗಿನ ಜಾವ 5 ಗಂಟೆಯಿಂದಲೇ ಬೆಂಗಳೂರು ಒನ್ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಗುರುವಾರ ಕೂಡ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ರಾಜಾಜೀನಗರದ 4ನೇ ಬ್ಲಾಕ್, ಮಲ್ಲೇಶ್ವರಂ ಕಾಡುಮಲ್ಲೇಶ್ವರ ವಾರ್ಡ್, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ವೃಷಭಾವತಿ ನಗರ ಹಾಗೂ ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧೆಡೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಬೆಳ್ಳಂ ಬೆಳಗ್ಗೆ ಸರ್ವರ್ ಸಮಸ್ಯೆ ಕಂಡುಬಂದಿದೆ. ಒಂದು ಅರ್ಜಿ ಸಲ್ಲಿಕೆಗೆ 30 ನಿಮಿಷಗಳ ಸಮಯ ಬೇಕಾಗುತ್ತಿದೆ.
ಇದನ್ನೂ ಓದಿ: ಹೋಟೆಲ್ ತಿಂಡಿ ಪ್ರಿಯರಿಗೆ ಬಿಗ್ ಶಾಕ್!- ಹೋಟೆಲ್ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ?
ಸರ್ವರ್ ಸಮಸ್ಯೆಯಿಂದಾಗಿ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಅರ್ಜಿ ಸಲ್ಲಿಸಲು ಕಾದು ನಿಂತ ಜನರು ಹಾಗೂ ಬೆಂಗಳೂರು ಒನ್ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸರ್ವರ್ ಸಮಸ್ಯೆಯ ಹೊರತಾಗಿಯೂ ಗೃಹಜ್ಯೋತಿ ಯೋಜನೆಗೆ 4 ದಿನದಲ್ಲಿ 12.51 ಲಕ್ಷ ನೋಂದಣಿಯಾಗಿದೆ.
ಒಂದೇ ಲಿಂಕ್‌ನಲ್ಲಿ ಸಾರ್ವಜನಿಕರು ಹಾಗೂ ನೋಂದಣಿ ಕೇಂದ್ರಗಳಲ್ಲಿ ನೋಂದಣಿಗೆ ಮುಂದಾಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಬುಧವಾರ ಬೆಂಗಳೂರು ಒನ್ ಕೇಂದ್ರಗಳಿಗೆ ಸೀಮಿತವಾಗಿ ಪರೀಕ್ಷಾರ್ಥ ಹೊಸ ಲಿಂಕ್‌ನ್ನು ಇಡಿಸಿಎಸ್ ನಿರ್ದೇಶನಾಲಯ ನೀಡಿದೆ. ಹೊಸ ಲಿಂಕ್ ಮೂಲಕ 30 ಸೆಕೆಂಡ್‌ನಿಂದ 60 ಸೆಕೆಂಡ್ ಒಳಗಾಗಿ ಅರ್ಜಿ ನೋಂದಾಯಿಸಬಹುದು ಎಂದು ಇ-ಆಡಳಿತ ಇಲಾಖೆ ತಿಳಿಸಿದೆ. ಇದಕ್ಕಾಗಿ ಪ್ರತ್ಯೇಕ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನೀಡಿದೆ.
ಹೊಸ ಲಿಂಕ್‌ನ್ನು ರಾಜ್ಯದ ಒಟ್ಟು 2,000 ಕೇಂದ್ರಗಳಿಗೆ ಗುರುವಾರದಿಂದ ನೀಡಲಾಗುತ್ತಿದೆ. ಬೆಂಗಳೂರು ಒನ್ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್, ವಿದ್ಯುಚ್ಛಕ್ತಿ ಕಚೇರಿಗಳು (750), ಗ್ರಾಮ ಪಂಚಾಯಿತಿಗಳು ಹಾಗೂ ನಾಡ ಕಚೇರಿಗಳಲ್ಲಿ ಪ್ರತ್ಯೇಕ ಲಿಂಕ್ ಮೂಲಕ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.