ಬೇರೊಬ್ಬನನ್ನ ಮದುವೆಯಾಗಲು ವಿಷ ಹಾಕಿ ಪ್ರಿಯಕರನನ್ನ ಕೊಂದ ಪ್ರೇಯಸಿ – ಜೈಲಿನಲ್ಲೂ ಸಹಕೈದಿಗಳ ಪಾಲಿಗೆ ಇವಳೇ ವಿಲನ್
ಜೈಲುಗಳಲ್ಲಿಯೂ ಕೈದಿಗಳ ನಡುವೆ ರೌಡಿಸಂ, ಕಿರಿಕ್ ಇರುತ್ತೆ ಅನ್ನೋದನ್ನ ನಾವು ಸಿನಿಮಾ, ಸೀರಿಯಲ್ ಗಳಲ್ಲಿ ನೋಡಿರುತ್ತೇವೆ. ಸದ್ಯ ಕೇರಳದಲ್ಲೂ ಕೂಡ ಇಂಥದ್ದೇ ಘಟನೆ ನಡೆದಿದೆ. ಪ್ರಿಯಕರನನ್ನ ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿಯ ಕಾಟಕ್ಕೆ ಸಹಕೈದಿಗಳು ಬೇಸತ್ತು ಹೋಗಿದ್ದಾರೆ. ಪರಿಣಾಮ ಜೈಲಿನಲ್ಲಿದ್ದ ಆರೋಪಿಯನ್ನ ವಿಶೇಷ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ಕೇರಳದ ಪರಸ್ಸಾಲ ಶರೋನ್ ಹತ್ಯೆ ಪ್ರಕರಣದ ಆರೋಪಿ ಗ್ರೀಷ್ಮಾಳನ್ನ ಮಾವೇಲಿಕ್ಕರ ವಿಶೇಷ ಜೈಲಿಗೆ ಸ್ಥಳಾಂತರಿಸಲಾಗಿದೆ. ಸಹ ಕೈದಿಗಳ ದೂರಿನ ಮೇರೆಗೆ ಗ್ರೀಷ್ಮಾ ಸೇರಿದಂತೆ ಇಬ್ಬರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಗ್ರೀಷ್ಮಾ ಬಂಧನವಾದಾಗಿನಿಂದ ಅಟ್ಟಕುಳಂಗರ ಜೈಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಗ್ರೀಷ್ಮಾ ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾದ ವ್ಯಕ್ತಿ! – ಕಾರಣವೇನು ಗೊತ್ತಾ?
ಅಕ್ಟೋಬರ್ 14, 2022 ರಂದು ತಮಿಳುನಾಡಿನ ಪಲುಕಲ್ನಲ್ಲಿರುವ ತನ್ನ ಮನೆಯಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್ಗೆ ವಿಷ ನೀಡಿದ್ದಳು. ಇದರಿಂದ ತೀವ್ರ ಅಸ್ವಸ್ಥನಾಗಿದ್ದ ಶರೋನ್ನನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜೀವನ್ಮರಣ ಹೋರಾಟದ ಬಳಿಕ ಶರೋನ್ ಅಕ್ಟೋಬರ್ 25 ರಂದು ನಿಧನನಾಗಿದ್ದ. ಚಿಕಿತ್ಸೆ ವೇಳೆಯೂ ಶರೋನ್ ತನ್ನ ಸಾವಿನ ಹೇಳಿಕೆಯಲ್ಲೂ ಗರ್ಲ್ಫ್ರೆಂಡ್ ಗ್ರೀಷ್ಮಾಳ ಮೇಲೆ ಅನುಮಾನ ಪಡಲಿಲ್ಲ. ಆಕೆಯೇ ನನಗೆ ವಿಷ ಹಾಕಿದ್ದಾಳೆ ಎಂದು ಆತ ಹೇಳಲಿಲ್ಲ. ಈ ಹಿನ್ನೆಲೆ ಪರಸ್ಸಾಲ ಪೊಲೀಸರು ಇದೊಂದು ಸಾಮಾನ್ಯ ಸಾವು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ನಂತರ ಅನುಮಾನ ಬಂದು ವಿಶೇಷ ತನಿಖಾ ತಂಡ ನಡೆಸಿದ ವಿಚಾರಣೆ ಮತ್ತು ತನಿಖೆಯ ಬಳಿಕ ಗ್ರೀಷ್ಮಾ ಶರೋನ್ಗೆ ವಿಷ ನೀಡಿ ಹತ್ಯೆ ಮಾಡಿರುವುದು ಪತ್ತೆಯಾಗಿತ್ತು..
ಶರೋನ್ನನ್ನ ಪ್ರೀತಿಸುತ್ತಿದ್ದ ಗ್ರೀಷ್ಮಾ ಬಳಿಕ ಅವನಿಂದ ದೂರಾಗಿ ಬೇರೊಬ್ಬನನ್ನ ಮದುವೆಯಾಗಲು ಪ್ಲ್ಯಾನ್ ಮಾಡಿದ್ದಳು. ಆದರೆ ಬ್ರೇಕಪ್ ಮಾಡಿಕೊಳ್ಳಲು ಶರೋನ್ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಆಕೆಯ ಊರಾದ ಪರಸ್ಸಾಲಾದಲ್ಲಿ ಶರೋನ್ ರಾಜ್ಗೆ ವಿಷ ನೀಡಿದ್ದಳು. ಗ್ರೀಷ್ಮಾ ಅವರ ತಾಯಿ ಮತ್ತು ಅಂಕಲ್ ಆಕೆಯಿಂದ ಕೊಲೆಯ ಬಗ್ಗೆ ತಿಳಿದುಕೊಂಡು ಅವಳನ್ನು ರಕ್ಷಿಸಲು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಪರಿಶೀಲನೆ ವೇಳೆ ಮನೆಯ ಪೊದೆಗಳ ಸುತ್ತಲು ಕೀಟನಾಶಕದ ವಿಷದ ಬಾಟಲಿಗಳು ಪತ್ತೆಯಾಗಿದ್ದವು. ವಿಚಾರಣೆ ಗ್ರೀಷ್ಮಾ ತಾನು ಕುಡಿಯಲು ಕೊಟ್ಟ ಕಷಾಯದಲ್ಲಿ (ಆಯುರ್ವೇದದ ಮಿಶ್ರಣ) ವಿಷ ಬೆರೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಳು ಎಂದು ತಿಳಿದುಬಂದಿದೆ.