ಬಾಹ್ಯಾಕಾಶದಲ್ಲಿ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು! – ಏನೆಲ್ಲಾ ಪ್ರಯೋಗ ನಡೆಯಲಿದೆ?

ಬಾಹ್ಯಾಕಾಶದಲ್ಲಿ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು! – ಏನೆಲ್ಲಾ ಪ್ರಯೋಗ ನಡೆಯಲಿದೆ?

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ 3 ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದೆ. ಇದೀಗ ನಾಲ್ವರು ಗಗನಯಾತ್ರಿಗಳು 14 ದಿನಗಳ ಕಾಲ ಬಾಹ್ಯಾಕಾಶಲ್ಲಿ 60 ಬಗೆಯ ಪ್ರಯೋಗಗಳನ್ನ ಮಾಡಲಿದ್ದಾರೆ. ಇದೀಗ ಈ ಯೋಜನೆಗೆ ಧಾರವಾಡ ಲಿಂಕು ಸಿಕ್ಕಿದೆ. ಅಧ್ಯಯನಕ್ಕಾಗಿ ಧಾರವಾಡದ ಹೆಸರು ಕಾಳು ಮತ್ತು ಮೆಂತೆ ಕಾಳು ಸಹ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ :ಕ್ಯಾಚ್ ಬಿಟ್ಟು ಮ್ಯಾಚ್ ಬಿಟ್ಟ ಜೈಸ್ವಾಲ್! – ಜೈಸ್ವಾಲ್ ಬಿಟ್ಟ ಕ್ಯಾಚ್‌ಗಳೆಷ್ಟು? – ಭಾರತದ ಕಳಪೆ ಫೀಲ್ಡಿಂಗ್‌ಗೆ ಸೋಲಿಗೆ ಕಾರಣ? 

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಹೆಸರು ಕಾಳು ಮತ್ತು ಮೆಂತೆ ಬೀಜಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಗಿದೆ. ಬಾಹ್ಯಕಾಶದಲ್ಲಿ ಈ ಸಲಾಡ್‌ ಬೀಜಗಳ ಮೊಳಕೆ ಗಗನಯಾತ್ರಿಗಳ ಆಹಾರ ಪೋಷಣೆ ಸಂಶೋಧನೆ ನಿಟ್ಟಿನಲ್ಲಿ ಪರೀಕ್ಷಾರ್ಥವಾಗಿ ರವಾನಿಸಲಾಗಿದೆ. ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಈ ಬೀಜಗಳಿಗೆ ನೀರು ಹಾಕುತ್ತಾರೆ. ಎರಡರಿಂದ ನಾಲ್ಕು ದಿನಗಳಲ್ಲಿ ಇವು ಮೊಳಕೆಯೊಡೆಯುತ್ತವೆ. ಮೊಳಕೆ ಕಾಳುಗಳನ್ನು ಬಾಹ್ಯಾಕಾಶದಲ್ಲಿ ಶೈತ್ಯ ಘಟಕದಲ್ಲಿ ಇಟ್ಟು ನಂತರ ಭೂಮಿಗೆ ತರಲಾಗುತ್ತದೆ.

ಮೊಳಕೆ ಕಾಳುಗಳನ್ನು ವಾಪಸ್ ಭೂಮಿಗೆ ತಂದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲಾಗುತ್ತದೆ. ಮೊಳಕೆ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೋ-ಹಾರ್ಮೋನ್‌ಗಳ ಚಟುವಟಿಕೆ ಹಾಗೂ ಜೀವಸೂತ್ರ (ಟ್ರಾನ್ಸ್ ಕ್ರಿಪ್ಲೋಮ್) ಪರೀಕ್ಷಿಸಿ ವಿಶ್ಲೇಷಿಸಲಾಗುವುದು, ಅಲ್ಲದೇ ಮೊಳಕೆಯ ಮೇಲೆ ಮೈಕ್ರೋಬಿಯಲ್ ಬೆಳವಣಿಗೆ ಅಧ್ಯಯನ ಮಾಡಲಾಗುತ್ತದೆ.

ಈ ಸಂಶೋಧನಯು ಭವಿಷ್ಯದಲ್ಲಿ ಅಂತರಿಕ್ಷ-ಯಾನದಲ್ಲಿ ಭಾರತೀಯರ ಆಹಾರದ ಭಾಗವಾಗಬಲ್ಲ ಆರೋಗ್ಯಕರ ಸಲಾಡ್ ತರಕಾರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೊಳಕೆಯೊಡೆಯುವ ಬೀಜಗಳನ್ನು ಬೆಳೆಸಲು ಕೇವಲ ಕಂಟೇನರ್, ನೀರು ಇದ್ದರೆ ಸಾಕು. ಮೊಳಕೆ ಕಾಳುಗಳು ಪೋಷಕಾಂಶ ಭರಿತವಾಗಿರುತ್ತವೆ.

ಗಗನಯಾನ ಮಿಷನ್ ಭವಿಷ್ಯದ ಯಾತ್ರಿಕರ ಆಹಾರ ಗಮನದಲ್ಲಿಟ್ಟುಕೊಂಡು ಈ ಸಂಶೋಧನೆಗೆ ಹೆಸರು, ಮೆಂತೆ ಬೀಜಗಳ ಮೊಳಕೆ ಅಧ್ಯಯನ ಆಯ್ಕೆ ಮಾಡಿಕೊಳ್ಳಲಾಗಿದೆ.

ಮೆಂತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಎಲುಬಿನ ಆರೋಗ್ಯ ಉತ್ತಮಗೊಳಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗಗನಯಾತ್ರಿಗಳ ಆರೋಗ್ಯದ ದೃಷ್ಟಿಯಿಂದ ಸಂಶೋಧನೆಗೆ ಈ ಬೀಜಗಳನ್ನು ಅಯ್ಕೆ ಮಾಡಲಾಗಿದೆ ಎಂದು ಪ್ರೊ.ಪಿ.ಎಲ್.ಪಾಟೀಲ ವಿವರಿಸಿದರು.

Shwetha M