ಶಿರಾಡಿ ಘಾಟ್‌ನಲ್ಲಿ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ – ಕೇಂದ್ರ ಸಚಿವ ನಿತಿನ್ ಗಡ್ಕರಿ
ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಇದರ ಬದಲಾಗಿ ಶಿರಾಡಿ ಘಾಟ್‌ನಲ್ಲಿ 26 ಕಿಲೋಮೀಟರ್ ವರೆಗೂ ಚತುಷ್ಪಥ ರಸ್ತೆಗಾಗಿ ವಿವರವಾದ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : ಬೇಕರಿಗೆ ನುಗ್ಗಿ ಯುವಕರ ಮೇಲೆ ಹಲ್ಲೆ – ಪುಂಡರ ಹೆಡೆಮುರಿಕಟ್ಟಿದ ಪೊಲೀಸರು
ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿರಾಡಿ ಘಾಟ್ ವಿಭಾಗದಲ್ಲಿ ಸುರಂಗಗಳ ನಿರ್ಮಾಣವು ಬೃಹತ್ ಹೂಡಿಕೆಯನ್ನು ಒಳಗೊಂಡಿರುತ್ತದೆ. ಆ ಹೂಡಿಕೆಗೆ ಮತ್ತು ಅಲ್ಲಿ ಸುರಂಗದ ಕಾಮಗಾರಿ ಮಾಡಲು ತೊಂದರೆ ಎದುರಾಗಬಹುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶಿರಾಡಿ ಘಾಟ್‌ನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ದ್ವಿಪಥದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಚಿವಾಲಯವು ನಿರ್ಧರಿಸಿದೆ. ಇದಕ್ಕಾಗಿ NHAI ಈಗಾಗಲೇ DPR ಸಲಹೆಗಾರರನ್ನು ತೊಡಗಿಸಿಕೊಂಡಿದೆ. ಅದರ ವರದಿ ಪ್ರಗತಿಯಲ್ಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಸುಮಾರು 8 ವರ್ಷಗಳ ಹಿಂದೆ ಶಿರಾಡಿ ಘಾಟ್‌ನಲ್ಲಿ ಸುರಂಗ ಬೈಪಾಸ್ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ನಿತಿನ್ ಗಡ್ಕರಿ ಫೆಬ್ರವರಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಮಾರು 14,000 ಕೋಟಿ ರೂಪಾಯಿ ವೆಚ್ಚದಲ್ಲಿ ಬೈಪಾಸ್ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು. ಮಂಗಳೂರು- ಶಿರಾಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ತೀರಾ ಹದಗೆಟ್ಟಿದ್ದು ತಕ್ಷಣ ದುರಸ್ಥಿಗೊಳಿಸಲು ಅನುದಾನ ನೀಡುವಂತೆ ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಸದ್ಯ ಮಳೆ ನಿಂತಿದ್ದು ರಸ್ತೆ ದುರಸ್ತಿಗೆ ಸಕಾಲ ಎಂದು ರಸ್ತೆ ದುರಸ್ಥಿ ಎಷ್ಟು ಮುಖ್ಯವಾಗಿದೆ ಅನ್ನೋದನ್ನು ಮನದಟ್ಟು ಮಾಡಿದ್ದರು. ವೀರೇಂದ್ರ ಹೆಗ್ಗಡೆಯವರ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿಯೂ ಭರವಸೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಯಿಂದಾಗಿ ರಾಡಿ ಬಿದ್ದ ಶಿರಾಡಿ ಘಾಟ್ ಕಾಮಗಾರಿ ಆದಷ್ಟು ಬೇಗ ಆರಂಭವಾದರೆ ಸಾಕು ಎಂದು ವಾಹನ ಸವಾರರು ಕೂಡಾ ಕಾಯುತ್ತಿದ್ದಾರೆ.