ಬೈಕ್ ಟ್ಯಾಕ್ಸಿಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌! – ಕೇಂದ್ರದ ನಿರ್ಧಾರಕ್ಕೆ ಚಾಲಕರು ಗರಂ!

ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಬಸ್​ಗಳಲ್ಲಿ ಓಡಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿದೆ. ಆದ್ರೆ ಯೋಜನೆ ಆರಂಭದಲ್ಲೇ ಟ್ಯಾಕ್ಸಿ, ಓಲಾ, ಉಬರ್ ಹಾಗೂ ಆಟೋ ಚಾಲಕರು ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿದ್ದರು. ಪ್ರಯಾಣಿಕರೇ ಇಲ್ಲದೆ ಜೀವನ ನಡೆಸೋದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಹಾಗೇ ರ್ಯಾಪಿಡೋ ಬೈಕ್ ಟ್ಯಾಕ್ಸಿ ವಿರುದ್ಧವೂ ಆಗಿದಾಂಗ್ಗೆ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದ್ರೀಗ ಕೆಲ ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ರಾಜ್ಯದಲ್ಲಿ ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿಗೆ ಈಗ ಕೇಂದ್ರ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ಪಾಕಿಸ್ತಾನ ಸಬ್‌ಮರೀನ್ ಅವಶೇಷ ಪತ್ತೆ – 53 ವರ್ಷಗಳ ಹಿಂದೆ ಮಧ್ಯರಾತ್ರಿ ಸಮುದ್ರದಲ್ಲಿ ನಡೆದಿದ್ದೇನು?

ಕೇಂದ್ರದ ನಿರ್ಧಾರಕ್ಕೆ ಚಾಲಕರು ಗರಂ!

ವೈಟ್ ಬೋರ್ಡ್‍ನಲ್ಲಿ ಬೈಕ್ ಟ್ಯಾಕ್ಸಿ ನಡೆಸಬಹುದು. ರಾಜ್ಯ ಸಾರಿಗೆ ಇಲಾಖೆ ಅನುಮತಿ ನೀಡಬಹುದು ಎಂದು ರಾಜ್ಯ ಸಾರಿಗೆ ಇಲಾಖೆಗೆ ಕೇಂದ್ರ ಸಾರಿಗೆ ಇಲಾಖೆ ಸಲಹೆ ನೀಡಿದೆ. ಕೇಂದ್ರದ ಈ ನಿರ್ಧಾರ ಸದ್ಯ ಆಟೋ ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸಾರಿಗೆ ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ರೆ ಉಗ್ರವಾದ ಹೋರಾಟ ಮಾಡ್ತೀವಿ ಎಂದು ಚಾಲಕರು ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯ ರೂಲ್ಸ್ ಪ್ರಕಾರ, ವೈಟ್ ಬೋರ್ಡ್ ಟು ವೀಲರ್ ಇರೋದು ಸ್ವಂತ ಬಳಕೆಗೆ ಮಾತ್ರ. ರಾಜ್ಯ ಸಾರಿಗೆ ಇಲಾಖೆ ಕರ್ನಾಟಕದಲ್ಲಿ ವೈಟ್ ಬೋರ್ಡ್ ಹಾಕಿ ಬೈಕ್ ಟ್ಯಾಕ್ಸಿ ನಡೆಸುವುದನ್ನು ಬ್ಯಾನ್ ಮಾಡಿದೆ.

ಹಿಂದಿನ ಬಿಜೆಪಿ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಲ್ಲಿ ಬೈಕ್ ಟ್ಯಾಕ್ಸಿ ನಡೆಸಬಹುದು ಎಂದು ಅನುಮತಿ ನೀಡಿತ್ತು. ಆದರೆ ಇದರಿಂದ ಆಕ್ರೋಶಗೊಂಡಿದ್ದ ರಾಜ್ಯ ಆಟೋ ಕ್ಯಾಬ್ ಚಾಲಕರು, ಕಳೆದ ವಾರ ಸಿಎಂ ಜೊತೆ ನಡೆದ ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿದ್ರು. ಇದಕ್ಕೆ ಮಣಿದ ಸರ್ಕಾರ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯಿಂದ ವರದಿಯನ್ನು ತರಿಸಿಕೊಂಡಿದ್ದಾರಂತೆ. ಈ ಹೊತ್ತಲ್ಲಿ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಕಳಿಸಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕಾಂಟ್ರಾಕ್ಟ್ ಕ್ಯಾರೆಜ್ ಅಡಿಯಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬಹುದು ಎಂದಿದೆ.

ಇದೀಗ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಕ್ಯಾಬ್ ಚಾಲಕರು ಸಿಡಿದೆದ್ದಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದ ಮನವಿ ಮೇರೆಗೆ ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿಗೆ ಈಗ ಕೇಂದ್ರ ಒಪ್ಪಿಗೆ ನೀಡಿದೆ. ವೈಟ್ ಬೋರ್ಡ್‍ನಲ್ಲಿ ಬೈಕ್ ಟ್ಯಾಕ್ಸಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಸಲಹೆ ನೀಡಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರೊಚ್ಚಿಗೆದ್ದ ಆಟೋ ಕ್ಯಾಬ್ ಚಾಲಕರು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ರೆ ಉಗ್ರವಾದ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಆದ್ರೆ ಇಲ್ಲಿ ಕೆಲ ಆಟೋ ಹಾಗೂ ಟ್ಯಾಕ್ಸಿ ಚಾಲಕರ ತಪ್ಪೂ ಇದೆ. ಮಿನಿಮಮ್ ಚಾರ್ಜ್ ಗಿಂತಲೂ ದುಪ್ಪಟ್ಟು ಹಣ ಕೇಳ್ತಾರೆ. ಕೆಲ ಪ್ರಯಾಣಿಕರಿಗೆ ಅಷ್ಟು ಹಣ ಕೊಡೋಕೆ ಆಗಲ್ಲ. ಹೀಗಾಗಿ ಬೈಕ್ ಟ್ಯಾಕ್ಸಿ ಮೊರೆ ಹೋಗ್ತಾರೆ. ಬೈಕ್ ಗಳಲ್ಲಿ ಹೋದ್ರೆ ಸ್ವಲ್ಪ ಮಟ್ಟಿಗಾದ್ರೂ ಟ್ರಾಫಿಕ್ ಜಾಮ್ ತಪ್ಪಿಸಬಹುದು. ಹಾಗೂ ಕಡಿಮೆ ದುಡ್ಡಿನಲ್ಲಿ ವೇಗವಾಗಿ ತಲುಪಬಹುದು ಎಂದುಕೊಳ್ಳುತ್ತಾರೆ. ಹೀಗಾಗಿ ಆಟೋ ಕೆಲ ಚಾಲಕರೂ ಸಹ ಬೇಕಾಬಿಟ್ಟಿ ದುಡ್ಡು ಕೇಳೋದನ್ನ ನಿಲ್ಲಿಸಬೇಕಿದೆ. ಬೈಕ್ ಟ್ಯಾಕ್ಸಿಯಿಂದ ಪ್ರಯಾಣಿಕರಿಗೆ ಅನುಕೂಲಗಳೂ ಇವೆ. ಅನಾನುಕೂಲಗಳೂ ಇವೆ. ಸ್ವಂತಕ್ಕೆ ಬಳಕೆ ಮಾಡಲಿರುವ ಬೈಕ್‍ಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದೇ ಟ್ಯಾಕ್ಸಿ ನಡೆಸುವುದು ಸರಿಯಲ್ಲ. ಆದರೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಾ ಅಥವಾ ತನ್ನ ಹಿಂದಿನ ರೂಲ್ಸ್ ಅನ್ನೇ ಫಾಲೋ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Shwetha M