ಹಾಸನಾಂಬ ದೇವಿ ದರ್ಶನಕ್ಕೆ ದಿನಗಣನೆ ಆರಂಭ – ಈ ಬಾರಿ ಗಣ್ಯರಿಗೆ ಅರ್ಚನೆ ಅವಕಾಶ ಇಲ್ಲ!
ಶಕ್ತಿಮಾತೆಯ ಸ್ವರೂಪವಾಗಿಯುವ ಹಾಸನಾಂಬೆ ದೇವಿ ದೇವಾಲಯದ ಬಾಗಿಲು ತೆರೆಯಲು ಕೆಲವೇ ದಿನಗಳು ಬಾಕಿ ಉಳಿದಿದೆ. ನವೆಂಬರ್ 2ರಿಂದ 15ರವರೆಗೆ ಭಕ್ತರಿಗೆ ಹಾಸನಾಂಬೆಯ ದರ್ಶನ ಸಿಗಲಿದೆ. ಆದರೆ ಈ ಬಾರಿ ಯಾವುದೇ ಗಣ್ಯರಿಗೂ ಅರ್ಚನೆ ಮಾಡಿಕೊಡದಿರಲು ತೀರ್ಮಾನಿಸಲಾಗಿದೆ.
ಪ್ರತಿ ವರ್ಷ ದೇವಿ ದರ್ಶನಕ್ಕೆ ಬಂದ ಗಣ್ಯರು ಮತ್ತು ಅತೀಗಣ್ಯರು ಹಾಗೂ ಅವರ ಕುಟುಂಬ ಪರಿವಾರವರು ದೇವಿಗೆ ವಿಶೇಷಪೂಜೆ, ಅರ್ಚನೆ ನೆರವೇರಿಸುತ್ತಾರೆ. ಗಣ್ಯರು ಬಂದ ಸಂದರ್ಭದಲ್ಲಿ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕೆಲಕಾಲ ನಿರ್ಬಂಧಿಸಲಾಗುತ್ತಿದೆ. ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅಡ್ಡಿಯಾಗಿ ಅವರ ಅಸಮಾಧಾನಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣದಿಂದ ಯಾವುದೇ ಗಣ್ಯರಿಗೂ ಅರ್ಚನೆ ಮಾಡಿಕೊಡದಿರಲು ತೀರ್ಮಾನಿಸಲಾಗಿದೆ. ಗಣ್ಯರಿಗೆ ಕೇವಲ ದರ್ಶನ ಮತ್ತು ಮಂಗಳಾರತಿಗಷ್ಟೇ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಇದನ್ನೂ ಓದಿ: ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ – ನವೆಂಬರ್ 2ರಿಂದ 15ರವರೆಗೆ ದಿನದ 24 ಗಂಟೆಯೂ ದರ್ಶನ
ವಿಐಪಿ, ವಿವಿಐಪಿಗಳನ್ನು ಕರೆದುಕೊಂಡು ಬಂದು ದರ್ಶನ ಮಾಡಿಸಲು ಜಿಲ್ಲಾ ಶಿಷ್ಟಾಚಾರ ಸಮಿತಿ ರಚಿಸಲಾಗಿದೆ. ಯಾರೇ ಆದರೂ ಮೊದಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಪಾಸ್ ಪಡೆಯುವುದು ಕಡ್ಡಾಯ. ಆ ಬಳಿಕ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ವಿಐಪಿಗಳಿಗೆ ಕೇವಲ ದರ್ಶನ ಹೊರತಾಗಿ ಅರ್ಚನೆಗೆ ಅವಕಾಶ ಇರುವುದಿಲ್ಲ ಅಂತಾ ಜಿಲ್ಲಾಡಳಿತ ತಿಳಿಸಿದೆ.
ಇದೇ ಮೊದಲ ಬಾರಿ ಗಣ್ಯರು, ಜನಪ್ರತಿನಿಧಿಗಳಿಗೆ ನೀಡುವ ಪಾಸ್‌ಗಳಿಗೆ ಬಾರ್‌ಕೋಡಿಂಗ್ ಹಾಗೂ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಮ್ಮೆ ಸ್ಕ್ಯಾನ್ ಮಾಡಿದರೆ ಅವರ ಭಾವಚಿತ್ರ ಸಹಿತ ಬರುತ್ತದೆ. ಅದು ಒಂದು ಬಾರಿ ಮಾತ್ರ ಬಳಸಲು ಸಾಧ್ಯವಾಗುತ್ತದೆ ಹಾಗೂ ನಕಲು ಮಾಡಲು ಸಾಧ್ಯವಾಗದಂತೆ ಪಾಸ್ ಸಿದ್ಧಪಡಿಸಲಾಗುತ್ತಿದೆ.