ಯಶವಂತಪುರ ಕ್ಷೇತ್ರಕ್ಕೆ ₹7.63 ಕೋಟಿ ಅನುದಾನ – ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಗೆ ಸರ್ಕಾರದಿಂದ ಬಂಪರ್ ಗಿಫ್ಟ್?

ಯಶವಂತಪುರ ಕ್ಷೇತ್ರಕ್ಕೆ ₹7.63 ಕೋಟಿ ಅನುದಾನ – ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಗೆ ಸರ್ಕಾರದಿಂದ ಬಂಪರ್ ಗಿಫ್ಟ್?

ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತದ ಚರ್ಚೆ ಜೋರಾಗಿದೆ. ಅದರಲ್ಲೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಅನ್ನೋ ಮಾತು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೆ ಬಾಂಬೆ ಬಾಯ್ಸ್ ತಂಡದ ಐವರು ಶಾಸಕರು ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಅನ್ನೋ ಚರ್ಚೆ ಕೂಡ ಜೋರಾಗಿದೆ. ಸದ್ಯ ತಮ್ಮ ಶಾಸಕರನ್ನ ಉಳಿಸಿಕೊಳ್ಳೋಕೆ ಬಿಜೆಪಿ ನಾಯಕರು ಕೂಡ ಕಸರತ್ತು ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೆಲ್ಲಾ ವದಂತಿ ಅನ್ನುವಂತೆ ಕಂಡರೂ ಕೂಡ ಒಳಗೊಳಗೆ ಆಪರೇಷನ್ ನಡೆಯುತ್ತಿದೆ ಅನ್ನೋ ಅನುಮಾನ ದಟ್ಟವಾಗುತ್ತಿದೆ.

ಇದನ್ನೂ ಓದಿ : ಕಾವೇರಿ ನದಿ ನೀರು ಹಂಚಿಕೆ ವಿವಾದ – ವಿಚಾರಣೆಗೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಅಸ್ತು

ಆಪರೇಷನ್ ಹಸ್ತ (Operation Hasta) ಬೆನ್ನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಅನುದಾನ ಕೊಟ್ಟಿದೆ. ಎಸ್.ಟಿ.ಸೋಮಶೇಖರ್ (S.T.Somshekar) ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ಚರ್ಚೆ ಬೆನ್ನಲ್ಲೇ, ಬಿಬಿಎಂಪಿಯಿಂದ ಅನುದಾನ ಮಂಜೂರಿನ ಆದೇಶ ಬಂದಿದೆ. ಈ ಕ್ಷೇತ್ರಕ್ಕೆ ಕುಡಿಯುವ ನೀರಿಗೆ 7.63 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಬಿಬಿಎಂಪಿ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಗಿಫ್ಟ್ ನೀಡಿದರೇ ಎಂಬ ಚರ್ಚೆ ಶುರುವಾಗಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. 1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್​ವೆಲ್ ಕೊರೆಸಲು 4 ಕೋಟಿ ರೂ. ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ. ಆಪರೇಷನ್ ಹಸ್ತದ ಮೊದಲ ವಿಕೆಟ್‌ಗೆ ಅನುದಾನದ ನೆರವು ಸಿಕ್ಕಿದೆ. 7.63 ಕೋಟಿ ರೂ. ಅನುದಾನ ನೀಡಿ ಎಸ್.ಟಿ. ಸೋಮಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ ಎನ್ನಲಾಗಿದೆ.

ಆಪರೇಷನ್ ಹಸ್ತ ಎನ್ನುತ್ತಿದ್ದಂತೆ ಮೊದಲ ಹೆಸರು ಕೇಳಿ ಬಂದಿದ್ದೇ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರದ್ದು. ನಿನ್ನೆಯಷ್ಟೆ ಸೋಮಶೇಖರ್ ಬೆಂಬಲಿತ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರಿದ್ದಾರೆ. ಈಗ ಯಶವಂತಪುರ ಕ್ಷೇತ್ರಕ್ಕೆ 7.63 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕೃತವಾಗಿ ‘ಕೈ’ ಹಿಡಿಯುವ ಎಸ್.ಟಿ. ಸೋಮಶೇಖರ್ ನಡೆಗೆ ಶೀಘ್ರವಾಗಿ ಮುಹೂರ್ತ ನಿಗದಿಯಾಗುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

suddiyaana