ಅಜ್ಜಿಯ ಮೃತದೇಹದ ಮುಂದೆ ಮೌನಕ್ಕೆ ಶರಣಾದ ಮೊಮ್ಮಗ – ಪಕ್ಕದಲ್ಲೇ ಕುಳಿತು ಅಪ್ಪನಿಗೆ ಧೈರ್ಯ ತುಂಬಿದ ಯುವರಾಜ್
ಮೆಲ್ಲುಸಿರೇ ಸವಿಗಾನ ಎನ್ನುತ್ತಾ ಅಭಿಮಾನಿಗಳ ಎದೆಗೆ ಹೂಬಾಣ ಬಿಟ್ಟ ಚೆಲುವೆ ಲೀಲಾವತಿ. ಬದುಕಿನಲ್ಲಿ ನೂರಾರು ಏಳು ಬೀಳುಗಳನ್ನು ಕಂಡರೂ ಬಿಂಕು ಭಿನ್ನಾಣ ತೋರದೆ ಸರಳ ಸುಂದರಿಯಾಗಿ ಮೆರೆದವರು. ನಾಯಕ ನಟನಷ್ಟೇ ಸರಿಸಮನಾಗಿ ಕನ್ನಡ ಚಿತ್ರರಂಗವನ್ನು ಆಳಿದ ಡಾ. ಎಂ ಲೀಲಾವತಿಯವರು ಇಂದು ನಮ್ಮೊಂದಿಗಿಲ್ಲ. ಕಲಾಲೋಕಕ್ಕೆ ಬೆಲೆ ಕಟ್ಟಲಾಗದಷ್ಟು ಕೊಡುಗೆ ನೀಡಿರುವ ಲೀಲಮ್ಮನ ಬದುಕು ಮಾತ್ರ ಯಾವತ್ತಿಗೂ ಮುಳ್ಳಿನ ಹಾಸಿಗೆಯೇ ಆಗಿತ್ತು. ಸದಾ ಕಾಡುವ ಸತ್ಯಗಳು, ಉತ್ತರವೇ ಸಿಗದ ಪ್ರಶ್ನೆಗಳು ಇಂದಿಗೂ ಜಮಮನಗಳಲ್ಲಿ ಕೊರೆಯುತ್ತಿದೆ. ಅಮ್ಮ ಅಮ್ಮ ಅಂತಾ ಹೆಜ್ಜೆ ಹೆಜ್ಜೆಗೂ ಅಮ್ಮನ ಉಸಿರಲ್ಲೇ ಬೆರೆತು ಹೋಗಿದ್ದ ವಿನೋದ್ ರಾಜ್ ಇಂದು ಒಂಟಿಯಾಗಿದ್ದಾರೆ. ಅಜ್ಜಿಯ ಮೃತದೇಹದ ಮುಂದೆ ಕುಳಿತು ಮೊಮ್ಮಗ ಕಂಬನಿ ಮಿಡಿದಿದ್ದಾನೆ.
ಇದನ್ನೂ ಓದಿ : ಲೀಲಮ್ಮನಿಗೆ ಕಲಾವಿದರಿಂದ ಅಂತಿಮ ನಮನ – ಗಣ್ಯರಿಂದ ವಿನೋದ್ ರಾಜ್‌ಗೆ ಸಾಂತ್ವನ
ಲೀಲಾವತಿ ಮತ್ತು ವಿನೋದ್ ರಾಜ್ ನಡುವಿನ ಬಂಧ ಹೇಗಿತ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಮಗನಿಗಾಗೇ ಬದುಕಿದ ತಾಯಿ, ಅಮ್ಮನಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಮಗ. ತಾಯಿ ಮಗ ಅಂದ್ರೆ ಹೀಗಿರಬೇಕಪ್ಪ ಎನ್ನುವಷ್ಟರ ಮಟ್ಟಿಗೆ ಇಬ್ಬರ ಬಾಂಧವ್ಯ ಇತ್ತು. ಹೀಗಾಗೇ ವಿನೋದ್ ಗೆ ಅಮ್ಮ ಇಲ್ಲ ಅನ್ನೋ ನೋವನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅಮ್ಮನೇ ಪ್ರಪಂಚ, ಅಮ್ಮನೇ ಜಗತ್ತು ಅಂತಾ ಬದುಕಿದ್ದ ವಿನೋದ್ ಅಮ್ಮನ ಪಾರ್ಥಿವ ಶರೀರದ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಿಸ್ತೇಜವಾಗಿ ಮಲಗಿರುವ ತಾಯಿಯನ್ನ ಕಂಡು ಕಣ್ಣೀರು ಹಾಕಿದ್ದಾರೆ. ಆದ್ರೆ ಇಂಥಾ ಟೈಮಲ್ಲಿ ವಿನೋದ್ ಕಣ್ಣೀರು ಒರೆಸಿದ್ದು ಅವರ ಮಗ ಯುವರಾಜ್ ಹಾಗೂ ಪತ್ನಿ ಅನು. ವಿನೋದ್ ರಾಜ್ ಪಕ್ಕದಲ್ಲೇ ಕುಳಿತು ಇಬ್ಬರು ಕೂಡ ಧೈರ್ಯ ತುಂಬಿದ್ದಾರೆ. ಅಜ್ಜಿಯ ಮೃತದೇಹವನ್ನು ನೋಡಿ ಮೊಮ್ಮಗ ಯುವರಾಜ್ ಕಂಬನಿ ಮಿಡಿದಿದ್ದಾರೆ. ಪಾರ್ಥಿವ ಶರೀರದ ಪಕ್ಕವೇ ಕುಳಿತು ಮೌನಕ್ಕೆ ಶರಣಾಗಿದ್ದಾರೆ. ಲೀಲಾವತಿಯವರಿಗೂ ಮೊಮ್ಮಗನೆಂದರೆ ಅಚ್ಚುಮೆಚ್ಚು. ಎಲ್ಲರನ್ನೂ ತಮ್ಮವರೆಂದು ಪ್ರೀತಿಸುವ ಲೀಲಮ್ಮ ತೊಮ್ಮ ಮೊಮ್ಮಗ ಯುವರಾಜ್ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ರು. ಹೀಗಾಗಿ ಅಜ್ಜಿ ಇಲ್ಲದ ನೋವಲ್ಲಿ ಯುವರಾಜ್ ಮೌನಕ್ಕೆ ಶರಣಾಗಿದ್ದ.
ಲೀಲಮ್ಮನವರ ಅಂತಿಮ ದರ್ಶನಕ್ಕೆ ಸೊಸೆ ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿಯವರ ಮೊಮ್ಮಗ ಯುವರಾಜ್ ಚೆನ್ನೈನಿಂದ ಆಗಮಿಸಿದ್ದರು. ಅಸಲಿಗೆ ವಿನೋದ್ ರಾಜ್ ಮದುವೆ ವಿಚಾರವಾಗಿ ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು. ಯಾಕಂದ್ರೆ ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಗೆಂದೇ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ ಎನ್ನಲಾಗಿತ್ತು. ಆದ್ರೆ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ಇದಾದ ಬಳಿಕ ಸಾಕಷ್ಟು ಟೀಕೆಗಳು, ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದು ವಿನೋದ್ ರಾಜ್ ಹಾಗೂ ಲೀಲಮ್ಮನಿಗೆ ಭಾರೀ ನೋವುಂಟು ಮಾಡಿತ್ತು. ಈ ವೇಳೆ ಸ್ವತಃ ಲೀಲಾಲವತಿಯವರೇ ಸ್ಪಷ್ಟನೆ ನೀಡಿದ್ದರು. ಹೌದು ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ ಎಂದು ಹೇಳಿಕೊಂಡಿದ್ದರು. ಲೀಲಮ್ಮನವರ ಆರೋಗ್ಯ ಹದಗೆಟ್ಟಿದ್ದ ವೇಳೆಯೂ ವಿನೋದ್ ರಾಜ್ ಅವರ ಪತ್ನಿ ಹಾಗೂ ಮಗ ನೆಲಮಂಗಲದ ಅವರ ಮನೆಗೆ ಬಂದು ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಲೀಲಾವತಿಯವರು ಊಟ, ನೀರು ಬಿಟ್ಟು ಯಾರೊಂದಿಗೂ ಕೂಡ ಮಾತನಾಡುತ್ತಿಲ್ಲ, ಯಾರನ್ನು ಕೂಡ ಗುರುತಿಸುತ್ತಿಲ್ಲ. ಇಂಥಾ ಪರಿಸ್ಥಿತಿಯನ್ನು ನೋಡಿ ವಿನೋದ್ ರಾಜ್ ಅವರ ಪತ್ನಿ ಹಾಗೂ ಮಗ ಕಣ್ಣೀರು ಹಾಕಿದ್ದರು. ಬೇಗ ಮೊದಲಿನಂತಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದರು. ಆದ್ರೆ ಮಗ, ಮೊಮ್ಮಗನ ಪ್ರಾರ್ಥನೆ ಫಲಿಸಲೇ ಇಲ್ಲ. ಲೀಲಮ್ಮ ಎಲ್ಲರನ್ನೂ ಬಿಟ್ಟು ಬಾರದ ಲೋಕ ಸೇರಿದ್ದಾರೆ. ಅಮ್ಮನಿಗಾಗೇ ಬದುಕಿದ್ದ ವಿನೋದ್ ಈಗ ಅಮ್ಮನಿಲ್ಲದೆ ಬದುಕಬೇಕಿದೆ. ಅಪ್ಪನಿಗೆ ಮಗನೇ ಆಸರೆಯಾಗಬೇಕಿದೆ. ಸಮಾಜದ ಕೊಂಕು ಮಾತುಗಳಿಗೆ ಕಿವಿಗೊಡದೆ ಇಡೀ ಕುಟುಂಬ ಒಟ್ಟಾಗಿ ಬದುಕಬೇಕಿದೆ.