ಟಿಕೆಟ್ ಕೈ ತಪ್ಪಿದ್ದಕ್ಕೆ ಬಂಡಾಯವೆದ್ದ ಯಡಿಯೂರಪ್ಪ ಮೊಮ್ಮಗ – ಸ್ಪರ್ಧೆ ಮಾಡಿಯೇ ಸಿದ್ಧ ಎಂದ ಎನ್.ಆರ್ ಸಂತೋಷ್
ಬಿಜೆಪಿ ಟಿಕೆಟ್ ಕೈತಪ್ಪಿದ ಮೇಲೆ ಎನ್.ಆರ್ ಸಂತೋಷ್ ಬಂಡಾಯವೆದ್ದಿದ್ದಾರೆ. ಹಾಸನದ ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಮೊಮ್ಮಗ ಎನ್ಆರ್ ಸಂತೋಷ್ ಸೋಮವಾರ 50 ಸಾವಿರ ಜನರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಸ್ವತಂತ್ರ ಸ್ಪರ್ಧೆಯೋ ಅಥವಾ ಬೇರೆ ಪಕ್ಷ ಸೇರಬೇಕೋ ಎನ್ನುವ ತೀರ್ಮಾನ ಮಾಡುತ್ತೇನೆ. ಜೆಡಿಎಸ್ ಆಹ್ವಾನ ಮಾಡಿದರೆ ಅದರ ಬಗ್ಗೆಯೂ ಯೋಚನೆ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಟಿಕೆಟ್ ಘೋಷಣೆ ಬೆನ್ನಲ್ಲೇ ‘ಕೇಸರಿ’ ಕೋಟೆಯಲ್ಲಿ ಕೋಲಾಹಲ – ರಾಜೀನಾಮೆ.. ಕಣ್ಣೀರು.. ಬಂಡಾಯ!
ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಜಿ.ವಿ ಬಸವರಾಜ್ ಪಾಲಾಗಿದೆ. ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ಆರ್ ಸಂತೋಷ್ ಅಸಮಾಧಾನಗೊಂಡಿದ್ದಾರೆ. ತಮ್ಮ ನಿವಾಸದಲ್ಲಿ ಬೆಂಬಲಿಗರ ಬೃಹತ್ ಸಭೆ ನಡೆಸಿ ಟಿಕೆಟ್ ಸಿಗದಿದ್ದಕ್ಕೆ ಕಣ್ಣೀರಿಟ್ಟಿದ್ದಾರೆ. ಬೇರೆ ಪಕ್ಷಕ್ಕೆ ಸೇರಬೇಕಾ, ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕಾ ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ನನಗೆ ಅವಕಾಶ ಕೊಟ್ಟಿಲ್ಲ. ನಾನು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಅವಕಾಶವನ್ನು ನಿರಾಕರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಸ್ಪರ್ಧೆ ಮಾಡಿಯೇ ಸಿದ್ದ ಎಂದು ಸಂತೋಷ್ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಸಹೋದರಿ ಪ್ರೇಮಾ ಅವರ ಮಗಳು ಗಿರಿಜಮ್ಮ ಅವರ ಮಗ ಸಂತೋಷ್ ಆಪರೇಷನ್ ಕಮಲದಲ್ಲಿ ಪಾತ್ರವಹಿಸಿದ್ದರು ಎನ್ನಲಾಗುತ್ತಿದೆ. ಮೊಮ್ಮಗ ಸಂತೋಷ್‌ಗೆ ಟಿಕೆಟ್ ತಪ್ಪಿರುವುದರಿಂದ ಯಡಿಯೂರಪ್ಪ ವಿರುದ್ಧವೇ ಸಹೋದರಿ ಬಿ.ಎಸ್.ಪ್ರೇಮಾ ಅಸಮಾಧಾನ ಹೊರಹಾಕಿದ್ದಾರೆ. ಅವರ ಸಂಬಂಧವೇ ಬೇಡ ಎಂದು ಕಣ್ಣೀರು ಹಾಕಿದ್ದಾರೆ. ತಾತನ ಜೊತೆ ಇರುತ್ತೇನೆ. ರಾಜಕೀಯ ಸೇರುತ್ತೇನೆ ಎಂದು ಹೋಗಿದ್ದ, ಕಷ್ಟಪಟ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದ. ಅಂದು ಎಂಟಿಬಿ ನಾಗರಾಜ್ ಅವರನ್ನ ವಿಮಾನ ಹತ್ತಿಸುವ ವೇಳೆ ಡಿಕೆ ಶಿವಕುಮಾರ್ ಕೈಗೆ ಸಿಕ್ಕಿದ್ದರೆ ನನ್ನ ಮೊಮ್ಮಗ ಉಳಿಯುತ್ತಿರಲಿಲ್ಲ. ಅಷ್ಟೆಲ್ಲಾ ಮಾಡಿ ಸರ್ಕಾರ ತಂದ ಮೊಮ್ಮಗನಿಗೆ ಮೋಸ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಸಂತೋಷ್ ಪತ್ನಿ ಜಾಹ್ನವಿ ಟಿಕೆಟ್ ಕೈ ತಪ್ಪಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂತೋಷ್ ತಾಯಿ ಕೂಡಾ ಮಗನಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.