ಡೊಳ್ಳು ಕುಣಿತ, ಹೂಮಳೆ.. ಪೂರ್ಣಕುಂಭ ಸಮೇತ ಬೆಳ್ಳಿರಥದಲ್ಲಿ ಮೆರವಣಿಗೆ – ವರ್ಗಾವಣೆಯಾದ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ

ಡೊಳ್ಳು ಕುಣಿತ, ಹೂಮಳೆ.. ಪೂರ್ಣಕುಂಭ ಸಮೇತ ಬೆಳ್ಳಿರಥದಲ್ಲಿ ಮೆರವಣಿಗೆ – ವರ್ಗಾವಣೆಯಾದ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ

ಶಿಕ್ಷಕ ವೃತ್ತಿಯೇ ಹಾಗೆ. ಮಕ್ಕಳ ಆಟ, ಪಾಠ ಎನ್ನುತ್ತಾ ಆ ಊರಿನ ಜೊತೆಗೆ ಆತ್ಮೀಯತೆ ಬೆಳೆದು ಬಿಡುತ್ತೆ. ಅದರಲ್ಲೂ ಕೆಲ ಶಿಕ್ಷಕರು ಮಕ್ಕಳ ಜೊತೆ ತಾವೂ ಮಕ್ಕಳಾಗಿ ಶಿಕ್ಷಣ ನೀಡುತ್ತಾರೆ. ಈ ಆತ್ಮೀಯತೆಯೇ ಮುಂದೆ ವರ್ಗಾವಣೆಯಾದಾಗ ಕಣ್ಣೀರಿನ ಕಟ್ಟೆಯಾಗಿ ಒಡೆಯುತ್ತೆ. ಈ ಹಿಂದೆಯೂ ಕೂಡ ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾದ ವೇಳೆ ಮಕ್ಕಳೆಲ್ಲಾ ತಬ್ಬಿ ಕಣ್ಣೀರಿಟ್ಟಿರುವ ಸಾಲು ಸಾಲು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ನಮ್ಮನ್ನ ಬಿಟ್ಟು ಹೋಗಬೇಡಿ ಎಂದು ಗೋಗರೆದಿದ್ದಾರೆ. ಆದರೆ ಇಲ್ಲಿ ವರ್ಗಾವಣೆಯಾದ ಶಿಕ್ಷಕಿಯನ್ನ ಊರ ತುಂಬಾ ಮೆರವಣಿಗೆ ಮಾಡಿ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ : ಬಿಸಿಯೂಟದ ಅಕ್ಕಿ ಖಾಲಿಯಾಯ್ತು ಎಂದು ವಿದ್ಯಾರ್ಥಿಗಳಿಗೆ ಮಂಡಕ್ಕಿ ನೀಡಿದ ಶಿಕ್ಷಕರು!

ಸರ್ಕಾರಿ ಶಾಲೆಯ ಈ ಶಿಕ್ಷಕಿಗೆ ಸಿಕ್ಕಿರುವ ಅದ್ಧೂರಿ ಬೀಳ್ಕೊಡಿಗೆ ಬಹುಶಃ ಈವರೆಗೆ ಯಾವುದೇ ಅಧಿಕಾರಿಗೆ ಸಿಕ್ಕಿಲ್ಲ ಎನ್ನಬಹುದು. ಯಾಕೆಂದರೆ ಅಷ್ಟರಮಟ್ಟಿಗೆ ಶಿಕ್ಷಕಿಯನ್ನು ಗೌರವಪೂರ್ಣವಾಗಿ ಕಳುಹಿಸಿಕೊಡಲಾಗಿದೆ. ಇದು ಸರ್ಕಾರಿ ಶಾಲೆಯ ಶಿಕ್ಷಕಿ, ಮಕ್ಕಳು ಹಾಗೂ ಗ್ರಾಮಸ್ಥರ ಅವಿನಾಭಾವಕ್ಕೆ ಸಾಕ್ಷಿಯಾದ ಕ್ಷಣವಾಗಿದೆ. ಇದು ನಡೆದಿರೋದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ. ಸರ್ಕಾರಿ ಶಾಲೆಯ ಶಿಕ್ಷಕಿ ಜ್ಯೋತಿ ಎಂಬುವವರು ವರ್ಗಾವಣೆ ಆಗಿದ್ದಾರೆ. ನೆಚ್ಚಿನ ಶಿಕ್ಷಕಿಯನ್ನು ಆಗಾಗ ನೋಡಲು ಸಾಧ್ಯವಾಗುವುದಿಲ್ಲ ಮತ್ತು ಅವರ ಅತ್ಯುತ್ತಮ ಮಾರ್ಗದರ್ಶನ ತಪ್ಪಿತಲ್ಲ ಎಂಬ ದುಃಖದಲ್ಲಿ ಮಕ್ಕಳು ಕಣ್ಣೀರಿಟ್ಟರು. ಜ್ಯೋತಿ ಅವರು ಪಾಠ ಹೇಳಿಕೊಡುವ ಶಿಕ್ಷಕಿಯ ಜತೆ ಮಮತೆಯನ್ನು ಸಹ ಮಕ್ಕಳಿಗೆ ಧಾರೆ ಎರೆಯುತ್ತಿದ್ದರು. ಇದು ಮಕ್ಕಳು ಮತ್ತು ಶಿಕ್ಷಕಿ ನಡುವೆ ಭಾವನಾತ್ಮಕ ಸಂಬಂಧ ಬೆಸೆದಿತ್ತು.

ಇದೀಗ ಶಿಕ್ಷಕಿ ಜ್ಯೋತಿ ತಮ್ಮ ಶಾಲೆ ಬಿಟ್ಟು ಹೊಗುತ್ತಿರುವುದಕ್ಕೆ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಗ್ರಾಮಸ್ಥರಿಗೂ ಜ್ಯೋತಿ ಅವರ ಮೇಲೆ ಅಭಿಮಾನ ಇತ್ತು. ಹೀಗಾಗಿ ಶಿಕ್ಷಕಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಜತೆಗೆ ಮಹಿಳೆಯರು ಹಾಗೂ ಮಕ್ಕಳಿಂದ ಪೂರ್ಣ ಕುಂಭ ಹೊತ್ತು ಗೌರವಪೂರ್ಣ ಬೀಳ್ಕೊಡಿಗೆ ನೀಡಿದರು. ಅಲ್ಲದೆ, ಡೊಳ್ಳು ಕುಣಿತ, ಹೂಮಳೆಗೈದು ನೆಚ್ಚಿನ ಶಿಕ್ಷಕಿಯನ್ನು ಭಾರದ ಮನಸ್ಸಿನಿಂದಲೇ ಮಕ್ಕಳು ಕಳುಹಿಸಿಕೊಟ್ಟಿದ್ದಾರೆ. ಕುರುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಶಿಕ್ಷಕಿ ಜ್ಯೋತಿ, ಕಳೆದ ಹದಿನೈದು ವರ್ಷದಿಂದ ಕುರುಳ್ಳಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಈಗ ಅವರ ವರ್ಗಾವಣೆಯಾಗಿದೆ. ಹದಿನೈದು ವರ್ಷದಲ್ಲಿ ಶಿಕ್ಷಕಿ ಜ್ಯೋತಿ ಮಕ್ಕಳ ಪ್ರೀತಿಯ ಜೊತೆಗೆ ಗ್ರಾಮಸ್ಥರ ಪ್ರೀತಿ ಗಳಿಸಿದ್ದಾರೆ. ಶಿಕ್ಷಕಿ ಜ್ಯೋತಿ ವರ್ಗಾವಣೆ ಹಿನ್ನೆಲೆ ಗ್ರಾಮಸ್ಥರು ಹಾಗೂ ಮಕ್ಕಳಿಗೆ ಬೇಸರವಾಗಿದೆ. ಆದರೂ ಅದ್ಧೂರಿಯಾಗಿ ಬೀಳ್ಕೊಟ್ಟು ಪ್ರೀತಿ ತೋರಿಸಿದ್ದಾರೆ

suddiyaana