RCB ಫ್ಯಾನ್ಸ್‌ಗೆ ಶನಿವಾರ ರಾತ್ರಿಯೇ ದೀಪಾವಳಿ – ಈ ಸಲ ಕಪ್ ನಮ್ದೇ
CSK ಸೋಲಿಸಿದ್ರೆ ಸಾಲದು - ಇನ್ನೊಂದು ಹ್ಯಾಟ್ರಿಕ್ ಬೇಕು

RCB ಫ್ಯಾನ್ಸ್‌ಗೆ ಶನಿವಾರ ರಾತ್ರಿಯೇ ದೀಪಾವಳಿ – ಈ ಸಲ ಕಪ್ ನಮ್ದೇCSK ಸೋಲಿಸಿದ್ರೆ ಸಾಲದು - ಇನ್ನೊಂದು ಹ್ಯಾಟ್ರಿಕ್ ಬೇಕು

ಇದೊಂದೇ ಒಂದು ಗೆಲುವಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಶನಿವಾರದ ರಾತ್ರಿಯೇ ದೀಪಾವಳಿ ಹಬ್ಬವಾಗಿಬಿಟ್ಟಿದೆ.. ಆರ್‌ಸಿಬಿ ಫ್ಯಾನ್ಸ್‌ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲು ದೊಡ್ಡ ಹಬ್ಬ ಆಚರಿಸಿದ್ದಾರೆ..  ಆರ್‌ಸಿಬಿ ಟೀಂ ಸಿಎಸ್‌ಕೆಯನ್ನು ಕೆಡವಿ ನಂತರ ಹೊಟೇಲ್‌ಗೆ ಹೊರಡುವವರೆಗೂ ಕಾದು ಕುಳಿತಿದ್ದ ಅಭಿಮಾನಿಗಳು ಆಟಗಾರರನ್ನು ದೊಡ್ಡ ಸಂಖ್ಯೆಯಲ್ಲಿ ಅಭಿನಂದಿಸಿ, ಈ ಸಲ ಕಪ್‌ ಗೆದ್ದುಕೊಂಡು ಬನ್ನಿ ಎಂದು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ..

ಇದನ್ನೂ ಓದಿ:17 ವರ್ಷಗಳಿಂದ ಒಂದೇ ಟೀಮ್‌ನಲ್ಲಿ ಆಟ – ವಿರಾಟ್‌ ಕೊಹ್ಲಿಗೆ ಕರ್ನಾಟಕದ ಜೊತೆಗಿನ ಬಾಂಧವ್ಯ ಎಂಥಾದ್ದು?

ಈ ಸಲ ಕಪ್‌ ನಮ್ದೇ ಎನ್ನುವುದು ಯಾವುದೇ ಐಪಿಎಲ್‌ ಸೀಸನ್‌ ಶುರುವಾದಾಗ್ಲೂ ಆರ್‌ಸಿಬಿ ಅಭಿಮಾನಿಗಳು ಹೇಳಿಕೊಳ್ಳುವ ಒನ್‌ ಲೈನ್‌ ಸ್ಲೋಗನ್‌.. ಆದರೆ ಈ ಬಾರಿ ಮೊದಲ ಸುತ್ತಿನ ಪಂದ್ಯಗಳು ಮುಗಿಯುವ ವೇಳೆಗೆ ಏಳರಲ್ಲಿ ಆರು ಸೋತಿದ್ದ ತಂಡ ಕಪ್‌ ಗೆಲ್ಲೋವರೆಗೆ ಹೋಗುತ್ತೆ ಅಂದ್ರೆ ಇವ್ರಿಗೆ ಹುಚ್ಚು ಹಿಡಿದಿದೆ ಎಂದು ಯಾರೇ ಆದ್ರೂ ಹೇಳ್ತಿದ್ದರು.. ಆರ್‌ಸಿಬಿಯ ಕಟ್ಟರ್‌ ಅಭಿಮಾನಿಗಳಲ್ಲೂ ಈ ಬಾರಿ ಗೆಲ್ಲೋದಿಲ್ಲ ಬಿಡು ಎಂಬ ಭಾವನೆ ಬಂದಿತ್ತು.. ಆದ್ರೆ ಆರ್‌ಸಿಬಿ ಅಭಿಮಾನಿಗಳಿಗೆ ಡುಪ್ಲೆಸಿಸ್‌ ಒಂದು ಮಾತು ಕೊಟ್ಟಿದ್ದರು.. ನಾಲ್ಕನೇ ಪಂದ್ಯ ಮುಗಿದು, ಅದರಲ್ಲೂ ಆರ್‌ಸಿಬಿ ಹೀನಾಯವಾಗಿ ಸೋತಾಗ, ಆರ್‌ಸಿಬಿ ಫ್ಯಾನ್ಸ್‌ಗೆ ಮಾತುಕೊಟ್ಟಿದ್ದರು.. ನಾವು ಸೋತರೂ ನೀವು ಇಷ್ಟೆಲ್ಲಾ ಅಭಿಮಾನದಿಂದ ಬೆಂಬಲಿಸುತ್ತಾ ಬಂದಿದ್ದೀರಿ.. ನೀವು ಹೆಮ್ಮೆ ಪಡುವಂತೆ ನಾವು ಆಡ್ತೇವೆ ಎಂದಿದ್ದರು.. ಅದನ್ನು ಅಕ್ಷರಶಃ ಆಡಿ ತೋರಿಸಿದ್ರು ಡುಪ್ಲೆಸಿಸ್‌.. ನಿರ್ಣಾಯಕ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆದ ಡುಪ್ಲೆಸಿಸ್‌, ಅಕ್ಷರಶಃ ಚೆನ್ನೈ ಕೈಯಿಂದ ಮ್ಯಾಚ್‌ ಕಿತ್ತುಕೊಂಡರು.. ಆರ್‌ಸಿಬಿಗೆ ಗೆಲ್ಲೋದು ಕಷ್ಟವಿರಲಿಲ್ಲ.. ಆದ್ರೆ ಪ್ಲೇಆಫ್‌ಗೆ ಎಂಟ್ರಿ ಕೊಡಲು ಬೇಕಿದ್ದ ನೆಟ್‌ ರನ್‌ ರೇಟ್‌ ಉಳಿಸಿಕೊಳ್ಳೋದು ಕಷ್ಟವಿತ್ತು.. ಆದ್ರೆ ಯಾವುದೇ ಅಡ್ಡಿ ಆತಂಕ ಇಲ್ಲದೆ, ಆರ್‌ಸಿಬಿ ಪ್ಲೇಆಫ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ..

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಶನಿವಾರ ರಾತ್ರಿ ನಡೆದಿದ್ದು ಆಟ ಅನ್ಬೇಕೋ ಅಥವಾ ಮ್ಯಾಜಿಕ್‌ ಅನ್ಬೇಕೋ ಗೊತ್ತಿಲ್ಲ.. ಮೈದಾನಕ್ಕೆ ಇಳಿದಾಗಲೇ ಆರ್‌ಸಿಬಿ ಮನಸ್ಸಿನಲ್ಲಿ ಒಂದೇ ಒಂದು ಗುರಿ ಫಿಕ್ಸ್‌ ಆಗಿತ್ತು.. ಈ ಪಂದ್ಯದಲ್ಲಿ ತಂತ್ರಗಾರಿಕೆ, ರಕ್ಷಣಾತ್ಮಕ ಆಟ, ಸೋತ್ರೆ ಗತಿಯೇನಪ್ಪಾ ಎಂಬ ಯೋಚನೆ.. ಇವ್ಯಾವುದಕ್ಕೂ ಅವಕಾಶ ಇಲ್ಲವೇ ಇಲ್ಲ.. ಈಗ ಉಳಿದಿರೋದು ಒಂದೇ ಒಂದು ಅವಕಾಶ.. ಹೊಡೀಬೇಕು.. ಗೆಲ್ಬೇಕು.. ಪ್ಲೇಆಫ್‌ಗೆ ಎಂಟ್ರಿ ಕೊಡಬೇಕು.. ಇದೊಂದೇ ಮಂತ್ರವನ್ನು ಮಾತ್ರ ಆರ್‌ಸಿಬಿ ಆಟಗಾರರು ಉಸಿರಾಡುತ್ತಿದ್ದರು.. ಇದ್ರಿಂದಾಗಿಯೇ ಮೊದಲ ಬಾಲ್‌ನಿಂದಲೇ ಅಬ್ಬರ ಶುರುವಾಗಿತ್ತು.. ಇದು ಕೊಹ್ಲಿ-ಡುಪ್ಲೆಸಿಸ್‌ ಆಟನಾ ಎಂಬ ರೀತಿಯಲ್ಲೇ ಓಪನಿಂಗ್‌ ಶುರುವಾಯ್ತು.. ಚೆನ್ನೈನ ಬೌಲರ್‌ಗಳ ಬೆವರು ಒರೆಸಲು ಮಳೆರಾಯನೇ ಬಂದು ಬ್ರೇಕ್‌ ಕೊಟ್ಟಿದ್ದ.. ಇಲ್ಲದೇ ಹೋಗಿದ್ರೆ ಮುಂದೇನು ಮಾಡೋದು ಎಂಬುದನ್ನು ಚೆನ್ನೈಗೆ ಯೋಚನೆ ಮಾಡಿಕೊಳ್ಳಲೂ ಅವಕಾಶ ಇಲ್ಲದಂತೆ ಮಾಡಿದ್ದರು ಕಿಂಗ್‌ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್‌..

ಟಾಸ್‌ ಗೆದ್ದ ಸಿಎಸ್‌ಕೆ ನಾಯಕ ಅದ್ಯಾವ ಪ್ಲ್ಯಾನ್‌ ಇಟ್ಕೊಂಡು ಮೊದಲು ಫೀಲ್ಡಿಂಗ್‌ ಆಯ್ದುಕೊಂಡರೋ ಗೊತ್ತಿಲ್ಲ.. ಬಹುತೇಕ ಆರ್‌ಸಿಬಿಯ ವೀಕ್‌ ಬೌಲಿಂಗ್‌ ಅನ್ನೇ ದೃಷ್ಟಿಯಲ್ಲಿಟ್ಟು ಈ ನಿರ್ಧಾರಕ್ಕೆ ಬಂದಿರಬಹುದು.. ಆದರೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮಾತ್ರ ಚೆನ್ನೈನ ಗೇಮ್‌ ಪ್ಲ್ಯಾನ್‌ ಅನ್ನೇ ಉಲ್ಟಾ ಮಾಡಿದ್ರು.. ಮೊದಲ ಓವರ್‌ನಿಂದಲೇ ಕೊಹ್ಲಿ, ಡುಪ್ಲೆಸಿಸ್‌ ಬ್ಯಾಟಿಂಗ್‌ ಮೂಲಕ ಅಬ್ಬರಿಸಲು ಶುರು ಮಾಡಿದ್ರು.. ಆದ್ರೆ ಮಳೆಯ ಬ್ರೇಕ್‌ ನಂತರ ಪಿಚ್‌ ಅಂದಾಜಿಸಿದ ಧೋನಿ, ಸ್ಪಿನ್‌ ಬೌಲಿಂಗ್‌ ಇಳಿಸಿ, ಆರ್‌ಸಿಬಿಯನ್ನು ಕಟ್ಟಿಹಾಕುವ ಕೆಲಸ ಮಾಡಿದ್ರು.. ಇದರಿಂದಾಗಿ ಮೊದಲ ಹತ್ತು ಓವರ್‌ಗಳಲ್ಲಿ ಆರಂಭದ ನಾಲ್ಕು ಓವರ್‌ಗಳ ರೀತಿಯಲ್ಲಿ ರನ್‌ ಹೊಳೆ ಹರಿಯಲಿಲ್ಲ.. ಆದ್ರೆ ಸ್ಪಿನ್‌ ಮೂಲಕ ಕಟ್ಟಿಹಾಕುವ ಚೆನ್ನೈನ ಪ್ರಯತ್ನ ತಾತ್ಕಾಲಿಕವಾಯ್ತು.. ಗ್ರೀನ್‌ ಮತ್ತು ಪಟಿದಾರ್‌, ಇಡೀ ಸ್ಟೇಡಿಯಂನ ಉದ್ದಗಲಕ್ಕೂ ಸಿಕ್ಸರ್‌ಗಳ ಮಳೆ ಸಿಡಿಸಿದ್ರು.. ಇದರ ನಡುವೆ ಚೆನ್ನೈನ ಫೀಲ್ಡರ್ಸ್‌ ಮಹತ್ವದ ಕ್ಯಾಚ್‌ ಡ್ರಾಪ್‌ ಮಾಡಿದ್ದು ಆರ್‌ಸಿಬಿಗೂ ಒಮ್ಮೊಮ್ಮೆ ಅದೃಷ್ಟ ಒಲಿಯುತ್ತೆ ಎಂಬಂತೆ ಕಾಣುತ್ತಿತ್ತು.. ಇಲ್ಲದಿದ್ದರೆ ಡೆರಿಲ್‌ ಮಿಚೆಲ್‌ ಕೂಡ ಕ್ಯಾಚ್‌ ಡ್ರಾಪ್‌ ಮಾಡುವುದು ಅಂದ್ರೆ ನಂಬೋದು ಸ್ವಲ್ಪ ಕಷ್ಟ.. ಕಡೆಯ ಮ್ಯಾಕ್ಸಿ ಅಬ್ಬರ ಈ ಹಿಂದಿನ ಎಲ್ಲಾ ವೈಫಲ್ಯವನ್ನು ಮರೆಮಾಚುವಂತೆ ಮಾಡಿತು.. ಹೊಸ ಎನರ್ಜಿಯಂದಿಗೆ ಎಂಟ್ರಿಯಾದ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ನಲ್ಲಿ ಅಬ್ಬರಿಸಿದ್ದು ಮಾತ್ರವಲ್ಲ ನಂತರ ಸಿಎಸ್‌ಕೆಯ ಬ್ಯಾಟಿಂಗ್‌ಗೂ ಕೊಳ್ಳಿಯಿಟ್ಟರು.. ತಂಡದ ಸ್ಕೋರ್‌ 219ಕ್ಕೆ ತಲುಪಿದ್ದರಿಂದ ಸಿಎಸ್‌ಕೆ ಗೆ ಗೆಲ್ಲೋದಕ್ಕಿಂತ ಹೆಚ್ಚಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಲೇ ಬೆಟ್ಟದಂತಹ ಸವಾಲು ಎದುರಾಗಿತ್ತು..

ಯಾವಾಗ ಚೆನ್ನೈ ಸ್ಪಿನ್ನರ್‌ಗಳು ಅಬ್ಬರಿಸಿದ್ರೋ ಆಗಲೇ ಆರ್‌ಸಿಬಿಯ ಬೌಲಿಂಗ್‌ ತಂತ್ರ ತಯಾರಾಗಿತ್ತು.. ಅದರಿಂದಾಗಿಯೇ ಮೊದಲ ಓವರ್‌ನಲ್ಲಿ ಹೊಸ ಬಾಲನ್ನು ಮ್ಯಾಕ್ಸಿ ಕೈಗೆ ಕೊಟ್ರು.. ಮೊದಲ ಎಸೆತದಲ್ಲೇ ಐಪಿಎಲ್‌ ಸೀಸನ್‌ನಲ್ಲಿ ಎರಡನೇ ಅತಿಹೆಚ್ಚು ಸ್ಕೋರ್‌ ಗಳಿಸಿದ್ದ ಸಿಎಸ್‌ಕೆ ನಾಯಕ ರುತುರಾಜ್‌ ಗಾಯಕ್ವಾಡ್‌ ಔಟಾಗುವುದರೊಂದಿಗೆ, ಸಿಎಸ್‌ಕೆ ಸೋಲು ಫಿಕ್ಸ್‌ ಆಗಿತ್ತು.. ನಂತರ ನಡೆದಿದ್ದೆಲ್ಲವೂ ಅದಕ್ಕೆ ಪೂರಕವಾದ ನಡಾವಳಿಗಳು ಅಷ್ಟೇ.. ಯಾಕಂದ್ರೆ ಮಿಡ್ಲ್‌ ಆರ್ಡರ್‌ನಲ್ಲಿ ರಚಿನ್‌ ರವೀಂದ್ರ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಪಾರ್ಟ್‌ನರ್‌ ಶಿಪ್‌ ಕೊಟ್ಟರೂ ತಂಡದ ಗೆಲುವಿಗಿಂತ ಪ್ಲೇಆಫ್‌ ಎಂಟ್ರಿಯ ತಂತ್ರಗಾರಿಕೆ ಮಾತ್ರ ಅವರ ಬ್ಯಾಟಿಂಗ್‌ನಲ್ಲಿತ್ತು.. ನಂತರ ಬಂದ ಶಿವಂ ದುಬೆ, ತಾನೂ ಕೆಟ್ಟದಾಗಿ ಆಡುವುದರ ಜೊತೆಗೆ ರಚಿನ್ ರವೀಂದ್ರರನ್ನು ಸುಖಾಸುಮ್ಮನೆ ರನೌಟ್‌ ಮಾಡಿಸಿ, ಸಿಎಸ್‌ಕೆ ಬೆನ್ನೆಲುಬು ಮುರಿಯುವಂತೆ ಮಾಡಿದರು.. ಆದರೆ ಸಿಎಸ್‌ಕೆಯ ಪ್ಲೇಆಫ್‌ ಕನಸು ಇದ್ದಿದ್ದು ಕೇವಲ ಧೋನಿಯ ಬ್ಯಾಟ್‌ ಮೇಲೆ ಮಾತ್ರ..

ಧೋನಿ 16ನೇ ಓವರ್‌ನಲ್ಲಿ ಕ್ರೀಸ್‌ಗೆ ಎಂಟ್ರಿ ಕೊಟ್ಟಾಗ ಸಿಎಸ್‌ಕೆ ಕೇವಲ ಪ್ಲೇಆಫ್‌ ಎಂಟ್ರಿಯ ಟಾರ್ಗೆಟ್‌ ರೀಚ್‌ ಆಗುವುದು ಮಾತ್ರ ಕನಸಾಗಿತ್ತು.. ಇದ್ರಿಂದಾಗಿ ಧೋನಿ ಹಾಗೂ ಜಡೇಜಾ ಲೆಕ್ಕಾಚಾರದಿಂದಲೇ ಆಟವಾಡಿದ್ರು.. ಕಡೆಯ ಓವರ್‌ನಲ್ಲಿ 19ನೇ ಓವರ್‌ನಲ್ಲಿ ಧೋನಿಗೆ ನೋಬಾಲ್‌ ಮತ್ತು ಫ್ರೀಹಿಟ್‌ಗೆ ಸಿಕ್ಸ್‌ ಹೊಡೆಯಲು ಸಾಧ್ಯವಾಗದೇ ಇದ್ದಾಗಲೇ ಆರ್‌ಸಿಬಿ ಪ್ಲೇಆಫ್‌ ಎಂಟ್ರಿಯಾಗುವುದು ಬಹುತೇಕ ಪಕ್ಕಾ ಆಗಿತ್ತು.. ಕಡೆಯ ಓವರ್‌ನಲ್ಲಿ 17ರನ್‌ಗಳ ಟಾರ್ಗೆಟ್‌ ಇದ್ದಾಗಲೂ ಧೋನಿ ಮೊದಲ ಎಸೆತದಲ್ಲಿ ಸಿಕ್ಸರ್‌ ಬಾರಿ, ಆರ್‌ಸಿಬಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದರು.. ಆದರೆ ಯಶ್‌ ದಯಾಳ್‌ ಎರಡನೇ ಎಸೆತವನ್ನು ಅದೇ ಸ್ವರೂಪದಲ್ಲಿ ಸಿಕ್ಸರ್‌ಗೆ ಅಟ್ಟುವ ಲೆಕ್ಕಾಚಾರ ಹಾಕಿದ್ದ ಧೋನಿ ಎಡವಿದರು.. ಬಾಲ್‌ ಧೋನಿ ನಿರೀಕ್ಷೆಯಂತೆ ಬ್ಯಾಟ್‌ನ ಮಿಡ್ಲ್‌ಗೆ ಬರಲಿಲ್ಲ.. ಒಂದೆರಡು ಇಂಚುಗಳ ವ್ಯತ್ಯಾಸದಲ್ಲಿ ಬಾಲ್‌ ಕನೆಕ್ಟ್‌ ಆಯ್ತು.. ಇದ್ರಿಂದಾಗಿ ನಿರೀಕ್ಷೆಗೂ ಮೀರಿ ಹೈ ಹೋದ ಬಾಲ್‌ ಬೌಂಡರಿ ಗೆರೆ ದಾಟಲಿಲ್ಲ.. ಧೋನಿ ಆ ಎಸೆತವನ್ನು ಸಿಕ್ಸ್‌ಗೆ ಅಟ್ಟಿರುತ್ತಿದ್ದರೆ ಆರ್‌ಸಿಬಿ ಪ್ಲೇಆಫ್‌ ಕನಸಿಗೂ ಕೊಳ್ಳಿ ಬೀಳುತ್ತಿತ್ತು.. ಆದ್ರೆ ಹಾಗಾಗಲಿಲ್ಲ.. ಅದೃಷ್ಟ ಆರ್‌ಸಿಬಿ ಪರವಾಗಿತ್ತು.. ಪಂದ್ಯದ ನಂತರ ಸಿಎಸ್‌ಕೆಯ ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದ ಮಾತು ನಿಜಕ್ಕೂ ಮಾರ್ಮಿಕವಾಗಿತ್ತು..  ಇಷ್ಟು ದಿನ ದೇವರು ಧೋನಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು.. ಆದರೆ ಎರಡೇ ಎರಡು ಇಂಚುಗಳಷ್ಟು ವ್ಯತ್ಯಾಸದಲ್ಲಿ ಬ್ಯಾಟ್‌ಗೆ ಬಾಲ್‌ ಕನೆಕ್ಟ್‌ ಆಗುವದರೊಂದಿಗೆ ಧೋನಿ ಔಟಾದರು.. ಬಹುಷಃ ದೇವರಿಗೂ ಅನ್ನಿಸಿರಬೇಕು.. ಇಷ್ಟು ದಿನ ಧೋನಿಗೆ ಎಲ್ಲವನ್ನು ಕೊಟ್ಟಿದ್ದೇನೆ.. ಈಗ ಸ್ವಲ್ಪ ಕೊಹ್ಲಿಗೂ ಕೋಡೋಣ ಎಂದು… ಹೀಗಂತ ರಾಯುಡು ಆರ್‌ಸಿಬಿಯ ಗೆಲುವನ್ನು ಧೋನಿ ಮತ್ತು ಕೊಹ್ಲಿ ಎಂಬ ಇಬ್ಬರು ದಿಗ್ಗಜರ ನಡುವಿನ ಅದೃಷ್ಟದ ರೀತಿಯಲ್ಲಿ ವಿವರಿಸಿದ್ದಾರೆ..

ಆರ್‌ಸಿಬಿಯ ಈ ಗೆಲುವು ಅಭಿಮಾನಿಗಳ ಪಾಲಿಗೆ ಕಪ್‌ ಗೆದ್ದಷ್ಟೇ ಖುಷಿಯಾಗಿದೆ.. ಆದರೆ ಇಷ್ಟಕ್ಕೇ ತಂಡ ಮೈಮರೆಯಬಾರದು.. ಡಬಲ್‌ ಹ್ಯಾಟ್ರಿಕ್‌ ಗೆಲುವುಗಳೊಂದಿಗೆ ತಂಡ ಪ್ಲೇಆಫ್‌ ತಲುಪಿದೆ.. ಇನ್ನೂ ಮೂರು ಮೆಟ್ಟಿಲು ಹತ್ತುವುದು ಬಾಕಿಯಿದೆ..17 ಸೀಸನ್‌ಗಳಿಂದ ಕಪ್‌ ಸಿಗದ ಬರ ಆರ್‌ಸಿಬಿಯನ್ನು ಕಾಡುತ್ತಿದೆ.. ಚೆನ್ನೈ ವಿರುದ್ಧ ಗೆದ್ದರೆ ಕಪ್‌ ಸಿಗೋದಿಲ್ಲ.. ಈಗ ಅಸಲಿ ಕಪ್‌ ಬೇಕಿದೆ.. ಆ ಕಪ್‌ ಗೆದ್ದು ಬರಬೇಕು.. ಹಾಗಿದ್ದಾಗ ಮಾತ್ರ ಆರ್‌ಸಿಬಿಯನ್ನು ಕಾಲೆಳೆಯುವ ಎದುರಾಗಳಿಗೆ ತಕ್ಕ ಪಾಠ ಕಲಿಸಲು ಸಾಧ್ಯ.. ಆಲ್‌ದಿ ಬೆಸ್ಟ್‌ ಆರ್‌ಸಿಬಿ..

Sulekha