ಕನ್ನಡ ಪದಗಳನ್ನು ಹಾಡುತ್ತಾ ಕನ್ನಡವನ್ನು ಮೆರೆಸಿದ ಸಾಹಿತಿ – ಕನ್ನಡಾಭಿಮಾನಕ್ಕೆ ಮತ್ತೊಂದು ಹೆಸರೇ ಜಿ.ಪಿ ರಾಜರತ್ನಂ

ಕನ್ನಡ ಪದಗಳನ್ನು ಹಾಡುತ್ತಾ ಕನ್ನಡವನ್ನು ಮೆರೆಸಿದ ಸಾಹಿತಿ – ಕನ್ನಡಾಭಿಮಾನಕ್ಕೆ ಮತ್ತೊಂದು ಹೆಸರೇ ಜಿ.ಪಿ ರಾಜರತ್ನಂ

ದೇವರೇ ಬಂದು ಕನ್ನಡ ಮಾತಾಡ್ಬೇಡ ಅಂದ್ರೆ ದೇವರಂತನೂ ನೋಡದೇ ಅವನಿಗೆ ಖತ್ನಾ ಮಾಡ್ತೀನಿ. ಕನ್ನಡದ ಸುದ್ದಿಗೇನಾದ್ರು ಬಂದ್ರೆ ಮಾನ ಉಳಿಸೋದಿಲ್ಲ ಎಂದು ಕನ್ನಡ ಪದಗಳನ್ನು ಹಾಡುತ್ತ ಕನ್ನಡವನ್ನು ಮೆರೆಸಿದ ಸಾಹಿತಿ ಜಿ.ಪಿ ರಾಜರತ್ನಂ.

ಇದನ್ನೂ ಓದಿ: ಕರ್ನಾಟಕದ ಸಂಸ್ಕೃತಿ ಜಗತ್ತಿಗೆ ಸಾರಿದ ಸ್ವರ ಸಾಮ್ರಾಜ್ಞಿ – ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ. ಗಂಗೂಬಾಯಿ ಹಾನಗಲ್

ಜಿ.ಪಿ ರಾಜರತ್ನಂ ಅವರು ಹುಟ್ಟಿದ್ದು ಡಿಸೆಂಬರ್‌ನಲ್ಲಿ. ಆದರೆ, ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಇವರನ್ನು ಕನ್ನಡಿಗರು ನೆನೆಯಲೇಬೇಕು.

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,

ಬಾಯ್ ಒಲಿಸಾಕಿದ್ರೂನೆ

ಮೂಗ್ನಲ್ ಕನ್ನಡ್ ಪದವಾಡ್ತೀನಿ !

ನರಕಕ್ಕೆ ಕಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲಿಸಿ ಹಾಕಿದ್ರೂ ಮೂಗಿನಲ್ಲಿ ಕನ್ನಡ ಪದಗಳನ್ನು ಮಾತನಾಡುವೆ ಎಂದು ಆರ್ದ್ರವಾಗಿ ಹೇಳುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ವಿಶೇಷವಾಗಿ  ವ್ಯಕ್ತಪಡಿಸಿದವರು ಜಿ.ಪಿ.ರಾಜರತ್ನಂ. ಇವರದ್ದು ಕೆಚ್ಚೆದೆಯ ಭಾಷಾಭಿಮಾನ. ಸಾಹಿತ್ಯ ಲೋಕದಲ್ಲಿ ಹೆಂಡ, ಹೆಂಡ್ತಿ, ಕನ್ನಡ ಪದಗಳ ಬಗ್ಗೆ ಅಪರೂಪದ ಕಲೆಯನ್ನು ಕಲಾ ರಸಿಕರಿಗೆ ಉಣ ಒಡಿಸಿದ ಖ್ಯಾತಿ ರಾಜತ್ನಂ ಅವರಿಗೆ ಸಲ್ಲುತ್ತದೆ. ತಾಯಿಯ ಮಮತೆಯಿಂದ ವಂಚಿತರಾಗಿ, ತಂದೆಯ ವಾತ್ಸಲ್ಯದಲ್ಲಿ, ಅಜ್ಜಿಯ ಅಕ್ಕರೆಯಲ್ಲಿ ಬೆಳೆದ ಜಿ. ಪಿ. ರಾಜರತ್ನಂ ಅಯ್ಯಂಗಾರ್ ಅವರು ಹುಟ್ಟಿದ್ದು 1905, ಡಿಸೆಂಬರ್ 5 ರಂದು. 1931 ರಲ್ಲಿ ಕನ್ನಡದಲ್ಲಿ ಎಂ. ಎ. ಮುಗಿಸಿದ ಇವರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದರಲ್ಲೂ ಕನ್ನಡದ ಬಗ್ಗೆ ಇವರಲ್ಲಿದ್ದ ಅಭಿಮಾನ ಹೇಳತೀರದ್ದು. ಕನ್ನಡ, ಸಂಸ್ಕೃತ, ಇಂಗ್ಲಿಷ್, ಪಾಳಿ, ಹಿಂದಿ, ಪ್ರಾಕೃತ, ತೆಲುಗು ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರೂ ಕನ್ನಡ ಅಂದ್ರೆ ವಿಶೇಷ ಪ್ರೀತಿ. ಪಿ. ಕಾಳಿಂಗ ರಾವ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಸೇರಿದಂತೆ ಹಲವು ಗಾಯಕರು ರಾಜರತ್ನಂ ಅವರ ಸಾಹಿತ್ಯಕ್ಕೆ ಸಂಗೀತದ ಮೂಲಕ ಉಸಿರು ಧಾರೆಯೆರೆದಿದ್ದಾರೆ.

ಮಕ್ಕಳಿಗೆ ಪಾಠ ಮಾಡುತ್ತ ಸಾಹಿತ್ಯ ಲೋಕ ಸಂಚಾರ ಮಾಡಿದ ರತ್ನಂಗೆ ಕನ್ನಡ ಸೇವೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಪ್ರೋತ್ಸಾಹವಿತ್ತು. ರಾಷ್ಟ್ರಕವಿ ಶಿವರುದ್ರಪ್ಪ ಅವರ ಗುರುಗಳಾಗಿದ್ದರು. ಇನ್ನು ಇಷ್ಟೇ ಅಲ್ಲದೆ, ಬಣ್ಣದ ತಗಡಿನ ತುತ್ತೂರಿ, ನಾಯಿ ಮರಿ ತಿಂಡಿ ಬೇಕೇ, ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು, ಕೂಸು ಮರಿ ಬೇಕೇ? ಕೂಸುಮರಿ, ಹೀಗೆ ಹತ್ತು ಹಲವು ಮಕ್ಕಳ ಪದ್ಯಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ ರಾಜರತ್ನಂ. ಈಗಲೂ ಕೂಡ ಮಕ್ಕಳು ಈ ಹಾಡುಗಳನ್ನು ಹೇಳುತ್ತಾ ಖುಷಿಪಡುತ್ತಾರೆ. ರಾಜರತ್ನಂ ಅವರು ಹಳೆ-ಹೊಸಗನ್ನಡದ ನಡುವೆ ಸೇತುವೆ ಆದರು. ಎಳೆಯ ಮಕ್ಕಳಿಗೆ ಅಗತ್ಯವಾದ ತಿಳಿಯಾದ ಸಾಹಿತ್ಯವನ್ನು ರಚಿಸಿಕೊಟ್ಟರು. ಬೆಳೆದವರ ಗಟ್ಟಿಹಲ್ಲಿಗೆ ತಕ್ಕುದಾದ ಪುಷ್ಟಿಕರ ವಿಚಾರದ ಉಂಡೆಗಳನ್ನು ಕಟ್ಟಿಕೊಟ್ಟರು. ಹಾಗೆಯೇ ದೊಡ್ಡವರ ಮೆಲುಕಿಗೆ ಚಿಂತನೆಯ ಗ್ರಾಸವನ್ನು ಒದಗಿಸಿದರು. ಹೀಗೆ ಮಕ್ಕಳಿಂದ ಮುದುಕರವರೆಗೆ ರಾಜರತ್ನಂ ಅವರು ಸಾಹಿತ್ಯದ ಸೇತುವೆ ಆದರು.

Sulekha