ರಾಜ್ಯದ ದೇವಾಲಯಗಳಲ್ಲಿ ಇನ್ನು ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ! – ಹಿರಿಯ ನಾಗರೀಕರಿಗೆ ನೇರ ದರ್ಶನ

ರಾಜ್ಯದ ದೇವಾಲಯಗಳಲ್ಲಿ ಇನ್ನು ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ! – ಹಿರಿಯ ನಾಗರೀಕರಿಗೆ ನೇರ ದರ್ಶನ

ಬೆಂಗಳೂರು: ಇನ್ನು ಮುಂದೆ ಹಿರಿಯ ನಾಗರೀಕರು ರಾಜ್ಯದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆಂದು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ. 65 ವರ್ಷ ಮೇಲ್ಪಟ್ಟವರು ಇನ್ನು ಮುಂದೆ ನೇರವಾಗಿ ದೇವರ ದರ್ಶನ ಮಾಡಬಹುದು. ಹಿರಿಯ ನಾಗರೀಕರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯ ಕಲ್ಪಿಸುವಂತೆ ಧಾರ್ಮಿಕ ದತ್ತಿ ಇಲಾಖೆಯು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಐದನೇ ದಿನವೂ ವಿಘ್ನ – ಸರ್ವರ್‌ ಸಮಸ್ಯೆಯಿಂದ ಸಿಬ್ಬಂದಿ ಸುಸ್ತು

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದೇವಾಲಯಗಳಾದ ‘ಎ’ ವರ್ಗ ಹಾಗೂ ‘ಬಿ’ ವರ್ಗ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸುವ ಬಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧವಂತರ ಒಕ್ಕೂಟ ಮನವಿ ಮಾಡಿತ್ತು. 65 ವರ್ಷ ಮೇಲ್ಪಟ್ಟ ಇರುವ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ವಯಸ್ಸಿನ ಆಧಾರದ ಮೇಲೆ ಸರತಿಯ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಒಕ್ಕೂಟವು ಮನವಿ ಪತ್ರದಲ್ಲಿ ಉಲ್ಲೇಖಿಸಿತ್ತು. ಸದ್ಯ ಈ ಬಗ್ಗೆ ಪರಿಶೀಲನೆ ನಡೆಸಿದ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳಲ್ಲಿ ಹಿರಿಯರಿಗೆ ನೇರ ದರ್ಶನ ಸೌಲಭ್ಯಕ್ಕೆ ಸೂಚನೆ ನೀಡಿದೆ.

ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಡುವ ಪ್ರವರ್ಗ ‘ಎ’ ಮತ್ತು ‘ಬಿ’ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ಇನ್ನು ಮುಂದೆ ದೇವರ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯಗಳಲ್ಲಿ ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕು. ಹಿರಿಯ ನಾಗರೀಕರಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು, ಸದರಿ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜಿಸಿ ಹಿರಿಯ ನಾಗರೀಕರಿಗೆ ಅರಿತ ದರ್ಶನ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸದ್ಯ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿಬೆಟ್ಟ, ಸಿಗಂದೂರು, ಕೊಲ್ಲೂರು ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಾಲಯಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ ಅವರಿಗೆ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

suddiyaana