‘ಭಾರತ್ ಜೋಡೋ ಯಾತ್ರೆಗೆ ಕೋವಿಡ್ ನೆಪವಷ್ಟೆ’ – ಮಾಂಡವೀಯ ಪತ್ರದ ವಿರುದ್ದ ರಾಹುಲ್ ಕಿಡಿ

‘ಭಾರತ್ ಜೋಡೋ ಯಾತ್ರೆಗೆ ಕೋವಿಡ್ ನೆಪವಷ್ಟೆ’ – ಮಾಂಡವೀಯ ಪತ್ರದ ವಿರುದ್ದ ರಾಹುಲ್ ಕಿಡಿ

ನವದೆಹಲಿ: ದೇಶದಾದ್ಯಂತ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ್ ಜೋಡೋ ಯಾತ್ರೆಯನ್ನು ಮೊಟಕುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಪತ್ರ ಬರೆದಿದ್ದಾರೆ. ಈ ಪತ್ರದ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ.

ಇದನ್ನೂ ಓದಿ:‘ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಿ’ – ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವರಿಂದ ಪತ್ರ

ಹರ್ಯಾಣದ ನುಹ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಈ ಯಾತ್ರೆಯು ಕಾಶ್ಮೀರದವರೆಗೂ ಪ್ರಯಾಣಿಸಲಿದೆ. ಬಿಜೆಪಿ ನಾಯಕರು ಈಗ ಹೊಸ ಆಲೋಚನೆಯೊಂದಿಗೆ ಬಂದಿದ್ದಾರೆ. ಕೋವಿಡ್ ಬರುತ್ತಿದೆ, ಹೀಗಾಗಿ ಯಾತ್ರೆ ನಿಲ್ಲಿಸಿ ಎಂದು ಅವರು ನನಗೆ ಪತ್ರ ಬರೆದಿದ್ದಾರೆ. ಯಾತ್ರೆಯನ್ನು ತಡೆಯಲು ನೆಪಗಳನ್ನು ಹುಡುಕಲಾಗುತ್ತಿದೆ ನೋಡಿ. ಕೋವಿಡ್ ಹರಡುತ್ತಿದೆ, ಮಾಸ್ಕ್ ಧರಿಸಿ… ಇದೆಲ್ಲವೂ ಯಾತ್ರೆ ನಿಲ್ಲಿಸಲು ನೆಪಗಳಷ್ಟೇ. ಅವರು ಈ ದೇಶದ ಶಕ್ತಿ ಮತ್ತು ಸತ್ಯ ಕಂಡು ಬೆದರಿದ್ದಾರೆ” ಎಂದು ಟೀಕಿಸಿದ್ದಾರೆ.

“ಭಾರತ್ ಜೋಡೋ ಯಾತ್ರೆಯು 100ಕ್ಕೂ ಹೆಚ್ಚು ದಿನಗಳನ್ನು ದಾಟಿದೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರೈಸ್ತರು ಸೇರಿದಂತೆ ಎಲ್ಲ ನಂಬಿಕೆಗಳ ಜನರು, ಮಹಿಳೆಯರು, ಪುರುಷರು ಮತ್ತು ಮಕ್ಕಳು ಎಲ್ಲರೂ ಇದರಲ್ಲಿ ಭಾಗವಹಿಸಿದ್ದಾರೆ. ಆದರೆ ಯಾರೊಬ್ಬರೂ ಕೂಡ ಇನ್ನೊಬ್ಬರ ಧರ್ಮ ಯಾವುದು, ಅವರು ಯಾವ ಸ್ಥಳದಿಂದ ಬಂದಿದ್ದಾರೆ. ಅವರು ಮಾತನಾಡುವ ಭಾಷೆ ಯಾವುದು ಎಂದು ಕೇಳಿಲ್ಲ. ಈ ಯಾತ್ರೆಯಲ್ಲಿ, 24 ಗಂಟೆಯೂ ಜನರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಪರಸ್ಪರ ಆಲಂಗಿಸುತ್ತಾರೆ ಮತ್ತು ಪ್ರೀತಿ ಹರಡುತ್ತಾರೆ” ಎಂದು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಠಾತ್ತನೆ ಕ್ರಮ ಕೈಗೊಳ್ಳುತ್ತಿರುವುದು ಭಾರತ್ ಜೋಡೋ ಯಾತ್ರೆಗೆ ಅಡ್ಡಿಪಡಿಸಲು ನಡೆಸಿರುವ ಸಂಚು ಎಂದು ಹಿರಿಯ ನಾಯಕ ಜೈರಾಂ ರಮೇಶ್ ದೂರಿದ್ದಾರೆ.

suddiyaana