ಅಂಗಾಂಗ ದಾನ ಸ್ವೀಕಾರಕ್ಕೆ ಇನ್ಮುಂದೆ ಹೊಸ ರೂಲ್ಸ್!
ನವದೆಹಲಿ: ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುವ ಕಾನೂನಿನಲ್ಲಿ ಸರ್ಕಾರ ಹೊಸ ತಿದ್ದುಪತಿ ಮಾಡಿದೆ. ಇಷ್ಟು ದಿನ ಮೃತಪಟ್ಟವರಿಂದ ಅಂಗಾಂಗಗಳನ್ನು ಪಡೆದುಕೊಳ್ಳಲು ಗರಿಷ್ಠ 65 ವರ್ಷದ ವಯೋಮಿತಿಯನ್ನು ನಿಗದಿಪಡಿಸಲಾಗಿತ್ತು. ಇದೀಗ ಈ ಕಾನೂನಿಗೆ ತಿದ್ದುಪಡಿ ತರಲಾಗಿದೆ.
ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು ಕೂಡ ಅಂಗಾಂಗ ಸ್ವೀಕೃತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಂಗಾಂಗ ದಾನ ಪಡೆದುಕೊಳ್ಳಲು ನಿಗದಿ ಪಡಿಸಲಾಗುತ್ತಿದ್ದ ವಾಸಸ್ಥಳ ಮಾನದಂಡವನ್ನು ತೆಗೆದುಹಾಕಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ
ಇದರಿಂದಾಗಿ ಅಂಗಾಂಗಗಳ ಅವಶ್ಯಕತೆ ಇರುವವರು ಯಾವ ರಾಜ್ಯದಿಂದ ಬೇಕಾದರೂ ದಾನ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ನೋಂದಣಿಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ 5 ಸಾವಿರದಿಂದ 10 ಸಾವಿರ ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಇನ್ನುಮುಂದೆ ನೋಂದಣಿ ಮಾಡಿಕೊಳ್ಳುವವರಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆದುಕೊಳ್ಳದಂತೆ ರಾಜ್ಯಗಳಿಗೆ ಸರ್ಕಾರ ಸೂಚನೆ ನೀಡಿದೆ.
ಈ ಮೊದಲು ಅಂಗಾಂಗ ದಾನ ಮಾಡಲು ಕೆಲ ರಾಜ್ಯಗಳು ಸ್ಥಳೀಯ ರೋಗಿಗಳಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಿದ್ದವು. ಇದನ್ನು ತಪ್ಪಿಸುವುದಕ್ಕಾಗಿ ಆರೋಗ್ಯ ಸಚಿವಾಲಯವು ವಾಸಸ್ಥಳದ ಮಾನದಂಡ ನಿಯಮ ರದ್ದುಪಡಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಿದೆ.