RSSಗೆ 35 ಎಕರೆ ಭೂಮಿ ಹಸ್ತಾಂತರಕ್ಕೆ ಸರ್ಕಾರ ತಡೆ – ಸದನದಲ್ಲೂ ಲಿಖಿತ ಉತ್ತರ ನೀಡಿದ ಸಚಿವ
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಿಂದಿನ ಬಿಜೆಪಿ ಸರ್ಕಾರದ ಕೆಲವು ನಿರ್ಧಾರಗಳಿಗೆ ತಡೆ ನೀಡುತ್ತಿದೆ. ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆ ಸೇರಿದಂತೆ ಕೆಲ ಕಾಯ್ದೆಗಳ ತಿದ್ದುಪಡಿಯನ್ನ ರದ್ದು ಮಾಡಿದೆ. ಇದೀಗ ಆರ್ಎಸ್ಎಸ್ಗೆ ಬಿಜೆಪಿ ಸರ್ಕಾರ 35 ಎಕರೆ 33 ಗುಂಟೆ ಗೋಮಾಳ ಜಮೀನು ನೀಡಿದ್ದ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಡೆ ನೀಡಿದೆ. ಆರ್ಎಸ್ಎಸ್ಗೆ ಸೇರಿದ ಜನಸೇವಾ ಟ್ರಸ್ಟ್ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿ ಗ್ರಾಮದ ತಾವರೆಕೆರೆ ಹೋಬಳಿಯಲ್ಲಿ ಭೂಮಿ ಹಸ್ತಾಂತರ ಮಾಡಿತ್ತು.
ಇದನ್ನೂ ಓದಿ : ಆಪರೇಷನ್ ವೇಳೆ ವೈದ್ಯರ ಎಡವಟ್ಟು – 18 ರೋಗಿಗಳ ದೃಷ್ಟಿಯೇ ಹೋಯ್ತು!
ಜಮೀನು ಮಂಜೂರು ತಡೆ ಹಿಡಿದ ಸಂಬಂಧ ಇಂದು (ಜುಲೈ 14) ಸದನದಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಲಿಖಿತ ಉತ್ತರ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಎಷ್ಟು ಸರ್ಕಾರಿ ಜಮೀನನ್ನು ಸಂಘ-ಸಂಸ್ಥೆಗಳಿಗೆ ಇಲಾಖೆಗಳಿಗೆ ಮತ್ತು ವಿವಿಧ ಉದ್ದೇಶಗಳಿಗೆ ನೀಡಲಾಗಿದೆ ಎಂದು ಸೋಮಶೇಖರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ಜನಸೇವಾ ಟ್ರಸ್ಟ್ಗೆ ನೀಡಲಾಗಿದ್ದ 35 ಎಕರೆ 33 ಗುಂಟೆ ಭೂಮಿಯನ್ನು ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಸೆಪ್ಟೆಂಬರ್ನಲ್ಲಿ ಗೋಮಾಳ ಭೂಮಿಯನ್ನು ಅಂದಿನ ಬಿಜೆಪಿ ಸರ್ಕಾರ ಜನಸೇವಾ ಟ್ರಸ್ಟ್ಗೆ ಮಂಜೂರು ಮಾಡಿತ್ತು. 2023ರ ಮೇನಲ್ಲಿ ಜಿಲ್ಲಾಧಿಕಾರಿ ಸಹ ಜನಸೇವಾ ಟ್ರಸ್ಟ್ಗೆ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಜಮೀನು ಹಸ್ತಾಂತರಕ್ಕೆ ತಡೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೇ ಮಂಜೂರಾತಿ ಆದೇಶ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯನವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.