ಕೇಂದ್ರ ಸರ್ಕಾರದಿಂದ 14 ಮೆಸೆಂಜರ್ ಆ್ಯಪ್ ಗಳು ಬ್ಯಾನ್! – ಯಾವ್ಯಾವ ಆ್ಯಪ್ ಗಳು ಗೊತ್ತಾ?
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕರು ರಹಸ್ಯ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸ್ಸಿನ ಮೇರೆಗೆ ಎನಿಗ್ಮಾ, ಸೇಫ್‌ವಿಸ್, ವಿಕ್ರ್ಮೆ, ಮೀಡಿಯಾಫೈರ್, ಕ್ರಿಪ್‌ವೈಸರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಜಂಗಿ, ಥ್ರೀಮಾ ಎಲಿಮೆಂಟ್ ಮತ್ತು ಸೆಕೆಂಡ್ ಲೈನ್ ಆ್ಯಪ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಮಹಿಳೆಯ ಬ್ಯಾಗ್ ನಲ್ಲಿತ್ತು 22 ಜೀವಂತ ಹಾವುಗಳು, 1 ಗೋಸುಂಬೆ!
ಬ್ಯಾನ್ ಮಾಡಲಾದ 14 ಆ್ಯಪ್ ಗಳು ಕಣಿವೆಯಲ್ಲಿ ಭಯೋತ್ಪಾದಕ ಕುರಿತಾದ ಪ್ರಚಾರವನ್ನು ಮಾಡುತ್ತಿತ್ತು. ಈ ಆ್ಯಪ್‌ಗಳ ಮೂಲಕ ಉಗ್ರರು ರಹಸ್ಯ ಸಂದೇಶಗಳನ್ನು ಕಣಿವೆಯಲ್ಲಿರುವ ತನ್ನ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದಾರೆ ಎಂದು ಭದ್ರತಾ ಮತ್ತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಈ ಹಿಂದೆ ಚೀನಾದ ಹಲವು ಅಪ್ಲಿಕೇಷನ್ ಗಳಾದ ಟಿಕ್ ಟಾಕ್, ಶೇರ್ ಚಾಟ್, ಹೆಲೋ, ಲೈಕಿ, ಯುಸಿ ನ್ಯೂಸ್, ಬಿಗೋ ಲೈವ್, ಯುಸಿ ಬ್ರೌಸರ್, ಜೆಂಡರ್, ಕ್ಯಾಮ್ ಸ್ಕ್ಯಾನರ್, ಪಬ್ ಜಿ, ಫ್ರೀ ಫೈರ್ ಮುಂತಾದ ಜನಪ್ರಿಯ ಮೊಬೈಲ್ ಗೇಮ್ ಹಾಗೂ ಆ್ಯಪ್ ಸೇರಿದಂತೆ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.