ರಕ್ಷಾ ಬಂಧನ ದಿನದಂದು ಮಹಿಳೆಯರಿಗೆ ಸರ್ಕಾರದಿಂದ ಬಂಪರ್ ಉಡುಗೊರೆ – ಈ ರಾಜ್ಯದಲ್ಲೂ ಉಚಿತ ಬಸ್ ಪ್ರಯಾಣ!
ಉತ್ತರ ಪ್ರದೇಶ: ರಕ್ಷಾ ಬಂಧನ ಹಬ್ಬವು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಒಂದು ಹಬ್ಬವಾಗಿದೆ. ಈ ಹಬ್ಬವು ಸಹೋದರ ಮತ್ತು ಸೋದರಿಯ ಬಂಧವನ್ನು ಸಾರುವ ಹಬ್ಬವಾಗಿದೆ. ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಾರಿಯೂ ರಾಕಿ ಹಬ್ಬದಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಉಡುಗೊರೆ ನೀಡಲಿದೆ.
2017 ರಿಂದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ರಕ್ಷಾ ಬಂಧನದಂದು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲಾಗುತ್ತಿದೆ. ಪ್ರತಿವರ್ಷದಂತೆಯೇ ಈ ಬಾರಿ ರಕ್ಷಾಬಂಧನ ಹಬ್ಬ ಆಗಸ್ಟ್ 30 ಹಾಗೂ 31 ಎರಡು ದಿನಗಳಲ್ಲಿ ಬಂದಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಚಿತ ಪ್ರಯಾಣದ ಅವಧಿಯನ್ನು ಎರಡು ದಿನಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಗಮವು ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ.
ಇದನ್ನೂ ಓದಿ: ದೇವಸ್ಥಾನದ ಹುಂಡಿಯಲ್ಲಿತ್ತು 100 ಕೋಟಿ ರೂ. ಚೆಕ್! – ಬ್ಯಾಂಕ್‌ಗೆ ತೆರಳಿದ ಸಿಬ್ಬಂದಿಗೆ ಕಾದಿತ್ತು ಶಾಕ್!
ಲಕ್ನೋ ಜೊತೆಗೆ ಕಾನ್ಪುರ, ಆಗ್ರಾ, ವಾರಣಾಸಿ, ಪ್ರಯಾಗರಾಜ್, ಮೀರತ್, ಗಾಜಿಯಾಬಾದ್, ಮಥುರಾ-ವೃಂದಾವನ, ಶಹಜಹಾನ್‌ಪುರ, ಝಾನ್ಸಿ, ಮೊರಾದಾಬಾದ್, ಗೋರಖ್‌ಪುರ, ಅಲಿಗಢ್ ಮತ್ತು ಬರೇಲಿಯ 14 ನಗರಗಳಲ್ಲಿ ಕಾರ್ಯನಿರ್ವಹಿಸುವ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಕಳೆದ ವರ್ಷ ಮಹಿಳೆಯರಿಗೆ ಬಹಳ ಅನುಕೂಲವಾಗಿರುವುದು ವರದಿಯಾಗಿದೆ. ಈ ವರ್ಷವೂ ಉಚಿತ ಪ್ರಯಾಣದ ಆದೇಶವನ್ನು ನಿರೀಕ್ಷಿಸಲಾಗಿದೆ ಎಂದು ಸಿಟಿ ಬಸ್ ಎಂಡಿ ಆರ್‌ಕೆ ತ್ರಿಪಾಠಿ ತಿಳಿಸಿದ್ದಾರೆ.
ರಕ್ಷಾಬಂಧನದಂದು ಮಹಿಳೆಯರಿಗೆ ಉಚಿತ ಪ್ರಯಾಣದ ಉಡುಗೊರೆ ಸಿಗುವುದು ಖಚಿತ ಎಂದು ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಹೇಳಿದ್ದಾರೆ. ಒಂದು ದಿನ ಅಂದರೆ 24 ಗಂಟೆಗಳ ಕಾಲ ಅವರು ರಾಜ್ಯದ ಎಲ್ಲಿಗೆ ಬೇಕಾದರೂ ಉಚಿತವಾಗಿ ತೆರಳಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿಗಳು ಉಚಿತ ಪ್ರಯಾಣದ ಅವಧಿಯನ್ನು ಎರಡು ದಿನಕ್ಕೆ ಹೆಚ್ಚಿಸಬಹುದು. ಈ ಕುರಿತು ಸಾರಿಗೆ ನಿಗಮದ ಅಧಿಕಾರಿಗಳು ಶೀಘ್ರವೇ ಆದೇಶ ಹೊರಡಿಸಲಿದ್ದಾರೆ.
2017 ಮತ್ತು 2018 ರಲ್ಲಿ, 11 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 22 ಲಕ್ಷಕ್ಕೆ ಏರಿಕೆಯಾಗಿದೆ. ಕೊರೊನಾ ಅವಧಿಯ ನಿರ್ಣಾಯಕ ಹಂತದಲ್ಲಿಯೂ ಏಳರಿಂದ 10 ಲಕ್ಷ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. 2017ರಿಂದ 2022ರ ನಡುವೆ ಈ ಸೌಲಭ್ಯಕ್ಕಾಗಿ ಪಾಲಿಕೆ ಮತ್ತು ಸರಕಾರದಿಂದ 54 ಕೋಟಿ ರೂ. ಖರ್ಚಾಗಿದೆ.