ಅನ್ನಭಾಗ್ಯದ ಜೊತೆ ಹಣದ ಭಾಗ್ಯ – ಜಾರಿಯಾಗುತ್ತಿದೆ ಸರ್ಕಾರದ ಎರಡನೇ ಗ್ಯಾರಂಟಿ
ಬೆಂಗಳೂರು: ಕಾಂಗ್ರೆಸ್‌ನ ಎರಡನೇ ಗ್ಯಾರಂಟಿ ಯೋಜನೆಗೆ ಸೋಮವಾರ ಅಧಿಕೃತ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಜು. 10 ರ ಸಂಜೆ 5 ಗಂಟೆಗೆ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಚುನಾವಣಾ ಪೂರ್ವದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೂ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು ಎನ್ನಲಾಗಿತ್ತು. ನಂತರ ಬಿಪಿಎಲ್ ಪಡಿತರದಾರರಿಗೆ 10ಕೆಜಿ ಅಕ್ಕಿ ಗ್ಯಾರಂಟಿ ಕಾಂಗ್ರೆಸ್ ಘೋಷಿಸಿತ್ತು. ಇದೀಗ ಐದು ಕೆಜಿ ಅಕ್ಕಿ ಜತೆಗೆ ಉಳಿದ 5 ಕೆ.ಜಿ ಅಕ್ಕಿ ಬದಲಿಗೆ 170 ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದ್ದು ಸೋಮವಾರ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ:ತಿಮಿಂಗಿಲ ದೇಹದಲ್ಲಿತ್ತು ಬರೋಬ್ಬರಿ 10 ಕೆಜಿ ʼಫ್ಲೋಟಿಂಗ್ ಗೋಲ್ಡ್ʼ! – ʼತೇಲುವ ಚಿನ್ನʼ ಇಷ್ಟೊಂದು ದುಬಾರಿ ಏಕೆ?
ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 170 ರೂ.ನಂತೆ ಹಣ, ಕುಟುಂಬದ ಮುಖ್ಯಸ್ಥನ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಈ ಗ್ಯಾರಂಟಿ ಯೋಜನೆಗೆ ಒಟ್ಟು 1,28,16,253 ಮಂದಿ ಫಲಾನುಭವಿಗಳಿದ್ದು, ಈ ಪೈಕಿ ಶೇಕಡಾ 82% ಮಂದಿ ತಕ್ಷಣ ಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎನ್ನಲಾಗಿದೆ. ಅದಲ್ಲದೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ್ದರೆ ಮಾತ್ರವೇ ಹಣ ವರ್ಗಾವಣೆ ಆಗುವುದಾಗಿ ಹೇಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು 2023-24ನೇ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ತಿಂಗಳಿಗೆ 856.25 ಕೋಟಿ ರೂ.ನಂತೆ 10,275 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ.
ಜುಲೈ 1 ರಂದು ಯೋಜನೆಯನ್ನು ಪ್ರಾರಂಭಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟವನ್ನು ಸ್ಥಗಿತಗೊಳಿಸುವ ನೀತಿ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಅಡಚಣೆ ಎದುರಾಯಿತು. ಹೀಗಾಗಿ ಇಕ್ಕಟ್ಟಿನಲ್ಲಿ ಸಿಕ್ಕಿರುವ ರಾಜ್ಯ ಸರ್ಕಾರವು ಅಕ್ಕಿ ಸರಬರಾಜು ಖಾತ್ರಿಯಾಗುವವರೆಗೆ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ನಗದು ಪಾವತಿಸಲು ನಿರ್ಧರಿಸಿದೆ. ಇದೀಗ ಸರಕಾರ ಟೆಂಡರ್ ಕರೆದಿದೆ.