ರಾಜ್ಯದಲ್ಲಿ ಬರದ ಛಾಯೆ – ಸರಳ ಮತ್ತು ಅರ್ಥಪೂರ್ಣ ದಸರಾ ಆಚರಣೆಗೆ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಬರದ ಛಾಯೆ – ಸರಳ ಮತ್ತು ಅರ್ಥಪೂರ್ಣ ದಸರಾ ಆಚರಣೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು, ಬರದ ಛಾಯೆ ಮೂಡಿದೆ. ವರುಣ ಕೃಪೆ ತೋರದಿದ್ದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇರುವುದರಿಂದಾಗಿ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಪೋಲೀಸರ ಬಿಗಿ ಭದ್ರತೆಯಲ್ಲಿ ದಸರಾ ಗಜಪಡೆಯ ತೂಕ ಪರೀಕ್ಷೆ – ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ಫಸ್ಟ್!‌

ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಸರಳ ಹಾಗೂ ಅರ್ಥಪೂರ್ಣ ದಸರೆ ಆಚರಣೆಗೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಮೈಸೂರು ನಗರಕ್ಕೆ ಎಲ್ಲೆಡೆಯಿಂದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ನವರಾತ್ರಿ ಹಬ್ಬವನ್ನು ಅತ್ಯಂತ ವೈಭವ ಮತ್ತು ಆಡಂಬರದಿಂದ ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಬ್ಬು ಬೆಳೆಗಾರರ ಸಂಘ ಹಾಗೂ ಇತರ ಸಂಘಟನೆಗಳು ದಸರಾವನ್ನು ಸರಳವಾಗಿ ಆಚರಿಸುವಂತೆ ಒತ್ತಾಯಿಸಿವೆ. ಈ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

Shwetha M