ಗಾಳಿ ಆಂಜನೇಯ ದೇವಾಲಯ ಸರ್ಕಾರದ ಸುಪರ್ದಿಗೆ – ಭಕ್ತರು, ಆಡಳಿತ ಮಂಡಳಿಯಿಂದ ಪ್ರತಿಭಟನೆ

ರಾಜಧಾನಿ ಬೆಂಗಳೂರಿನ ಪ್ರಸಿದ್ಧ ದೇಗುಲಗಳಲ್ಲಿ ಗಾಳಿ ಆಂಜನೇಯ ದೇಗುಲ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ದೇವಸ್ಥಾನವನ್ನು ಇದೀಗ ಸರ್ಕಾರ ಮುಜುರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಂಡಿದ್ದು, ಈ ನಿರ್ಧಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ದೇಗುಲ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಅಂದಹಾಗೇ ಗುರುವಾರ ಮುಜರಾಯಿ ಇಲಾಖೆಯು ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು ತನ್ನ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿತ್ತು. ಇದಕ್ಕೆ ದೇವಾಲಯದ ಟ್ರಸ್ಟ್ ಹಾಗೂ ಭಕ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ದೇಗುಲದ ಎದುರು ಸಾವಿರಕ್ಕೂ ಹೆಚ್ಚು ಭಕ್ತರು ಬೃಹತ್ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಭಾಗಿಯಾಗಿ ಟ್ರಸ್ಟ್ ಕಾರ್ಯ ಸಹಿಸದವರು ಹುಂಡಿ ಕಳವು ಪ್ರಕರಣ ಎಳೆತಂದು ಆರೋಪ ಮಾಡ್ತಿದ್ದಾರೆ ಎಂದು ದೂರಿದ್ದಾರೆ. ಐತಿಹಾಸಿಕ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೇಯೋಭಿವೃದ್ಧಿ ಸಹಿಸದೇ ಇಂಥ ಷಡ್ಯಂತ್ರ ನಡೆಸಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ದೇವಾಲಯದಲ್ಲಿ ಆಡಳಿತ ನಿರ್ವಹಣೆ ಸರಿ ಇಲ್ಲ ಎಂಬುದನ್ನು ತೋರಿಸಿತ್ತು.

ನೋಡಿರಿ

